ನವ ದೆಹಲಿ (ಆ, 27) : "ತಾಲಿಬಾನ್ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ ನೆಲೆಸಲು, ಅಲ್ಲಿನ ಜನ ನೆಮ್ಮದಿಯ ಬದುಕನ್ನು ಸಾಗಿಸಲು ಭಾರತ ಸರ್ಕಾರ ಶ್ರಮ ವಹಿಸಬೇಕು" ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿದ್ದ 20 ವರ್ಷಗಳ ಪ್ರಜಾಪ್ರಭುತ್ವ ಸರ್ಕಾರವನ್ನು ಕೊನೆಗೊಳಿಸಿ ತಾಲಿಬಾನ್ ಉಗ್ರಗಾಮಿಗಳ ಗುಂಪು ಅಫ್ಘನ್ ಅನ್ನು ಆಕ್ರಮಿಸಿದೆ. ಪರಿಣಾಮ ಕಾಬೂಲ್ನಲ್ಲಿ ಹಿಂಸಾಚಾರ ಮತ್ತು ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಭಾರತ ಸೇರಿದಂತೆ ಎಲ್ಲಾ ದೇಶಗಳೂ ತಮ್ಮ ರಾಜತಾಂತ್ರಿಕರನ್ನು ಹಿಂದೆ ಕರೆದುಕೊಂಡಿದ್ದಾರೆ. ಅಲ್ಲದೆ, ಅಫ್ಘನ್ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಇಂದು ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಸಹ ಭಾಗಿಯಾಗಿದ್ದರು.
ಸರ್ವ ಪಕ್ಷಗಳ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅಫ್ಘನ್ನಿಂದ ಭಾರತದ ಪ್ರಜೆಗಳನ್ನು ರಕ್ಷಿಸಿ ಕರೆತಂದ ಕಾರ್ಯಾಚರಣೆ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ, ಅಫ್ಘನ್ ಬಗ್ಗೆ ಭಾರತದ ಮುಂದಿನ ನಿಲುವು ಮತ್ತು ಭಾರತ ರಕ್ಷಣಾ ವ್ಯವಸ್ಥೆ ಬಗೆಗಿನ ಪ್ರಶ್ನೆಗಳನ್ನು ಸಭೆಯಲ್ಲಿ ಮಂಡಿಸಿದ್ದಾರೆ. ಈ ಬಗ್ಗೆ ಎಲ್ಲಾ ಪಕ್ಷದ ನಾಯಕರೂ ತಮ್ಮ ಅಭಿಪ್ರಾಯ -ಅಭಿಮತವನ್ನು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಈ ಸಭೆ ಬಳಿಕ ಪಕ್ಷದ ವತಿಯಿಂದ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, "20 ವರ್ಷಗಳ ಕಾಲ ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿದ್ದ ಅಫ್ಘನ್ನಲ್ಲಿ ಇದೀಗ ಇದ್ದಕ್ಕಿಂದ್ದಂತೆ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಅಲ್ಲಿನ ಜನ ನೆಮ್ಮದಿ ಕಳೆದುಹೋಗಿದೆ. ಆದರೆ, ಇದನ್ನು ಮತ್ತೆ ಅಲ್ಲಿನ ಜನರಿಗೆ ಹಿಂದಿರುಗಿಸಬೇ ಕಾದದ್ದು, ಎಲ್ಲಾ ದೇಶಗಳ ಕರ್ತವ್ಯವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ವಿಶ್ವ ರಾಷ್ಟ್ರಗಳು ಅಫ್ಘನ್ ಜನರ ಬೆನ್ನಿಗೆ ನಿಲ್ಲಬೇಕು. ಜಿ.7 ಶೃಂಗಸಭೆಯಲ್ಲಿ ಎಲ್ಲಾ ಮುಂದುವರೆದ ರಾಷ್ಟ್ರಗಳು ಅಫ್ಘನ್ ವಿಚಾರವನ್ನು ಚರ್ಚೆ ನಡೆಸಬೇಕು. ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಫ್ಘನ್ ಬಿಕ್ಕಟ್ಟಿನಲ್ಲಿ ಭಾರತದ ನಿಲುವಿನ ಬಗ್ಗೆಯೂ ಗಮನ ಸೆಳೆದಿರುವ ದೇವೇಗೌಡ, "ಅಫ್ಘನ್ ಬಿಕ್ಕಟ್ಟಿನ ಕಾಲದಲ್ಲಿ ಭಾರತದ ರಕ್ಷಣೆ ಮತ್ತು ಭದ್ರತೆ ನಮಗೆ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಇಂತಹ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅಫ್ಘನ್ ಜನರ ಜೊತೆಗೆ ನಿಲ್ಲಬೇಕಾದದ್ದು, ಅಲ್ಲಿನ ಪರಿಸ್ಥಿತಿ ಸುಧಾರಿಸಲು ಸಹಕರಿಸಬೇಕಾದದ್ದು ಭಾರತದ ಕರ್ತವ್ಯ.
ಈ ವಿಚಾರದ ಬಗ್ಗೆ ಭಾರತ ವಿಶ್ವಸಂಸ್ಥೆಯ ಗಮನ ಸೆಳೆಯಬೇಕು. ವಿಶ್ವಸಂಸ್ಥೆಯ ಸಹಕಾರದೊಂದಿಗೆ ಅಫ್ಘನ್ ಸರ್ಕಾರದ ಜೊತೆ ಸಂವಹನ ನಡೆಸಬೇಕು, ಅಲ್ಲಿ ಮತ್ತೆ ಶಾಂತಿ-ನೆಮ್ಮದಿ ನೆಲಸುವಂತೆ ಮಾಡಬೇಕು. ಮಾನವೀಯತೆಯನ್ನು ಉಳಿಸಬೇಕು. ಅಲ್ಲಿನ ಅಭಿವೃದ್ಧಿಗೆ ಮತ್ತು ಪ್ರಜಾಪ್ರಭುತ್ವ ಪಾಲನೆಗೆ ಭಾರತ ತನ್ನದೇಯಾದ ಕೊಡುಗೆ ನೀಡುವ ಕಾಲ ಇದಾಗಿದೆ. ಈ ಮೂಲಕ ವಿಶ್ವ ರಾಷ್ಟ್ರಗಳ ನಡುವೆ ರಾಜಕೀಯವಾಗಿ ಭಾರತ ಮತ್ತಷ್ಟು ಎತ್ತರಕ್ಕೆ ಏರಲಿದೆ" ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಬಗ್ಗೆಯೂ ಗಮನ ಸೆಳೆದಿರುವ ದೇವೇಗೌಡ, "ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಜನರ ಬದುಕು ಅಫ್ಘನ್ ಪ್ರಜೆಗಳಿಗಿಂತ ಕಡಿಮೆ ಏನಿಲ್ಲ. ಇಲ್ಲಿನ ನಿವಾಸಿಗಳೂ ಸಹ ಇಂತಹದ್ದೇ ಬಿಕ್ಕಟ್ಟಿನಲ್ಲಿ ಬಹು ವರ್ಷಗಳಿಂದ ಬದುಕುತ್ತಿದ್ದಾರೆ. ಹೀಗಾಗಿ ಅಫ್ಘನ್ ಜನರ ಕಷ್ಟಗಳಿಗೆ ಮಿಡಿಯುವ ನಾವು ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಜನರಿಗಾಗಿ ಮಿಡಿಯಬೇಕಿದೆ. ಅಲ್ಲಿನ ಜನರ ಬದುಕನ್ನೂ ಸುಧಾರಿಸಲು ಕೇಂದ್ರ ಸರ್ಕಾರ ಶ್ರಮಿಸಬೇಕಿದೆ" ಎಂದು ಮಾಜಿ ಪ್ರಧಾನಿ ಕಿವಿಮಾತು ಹೇಳಿದ್ದಾರೆ.