ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದ್ದು, ಇದರಿಂದ ಸಿಡಿದೆದ್ದಿರುವ ಅವರ ಬೆಂಬಲಿಗರು ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಮಂಗಳವಾರ ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್ನ ಹೈಕೋರ್ಟ್ ತೆರಳುತ್ತಿದ್ದ ವೇಳೆಯೇ ಇಮ್ರಾನ್ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಬಳಿಕ ಅವರ ಬೆಂಬಲಿಗರು ಲಾಹೋರ್ನಲ್ಲಿರುವ ಸೇನಾ ಕಮಾಂಡರ್ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ. ಪೇಶಾವರದಲ್ಲಿ ಪಾಕಿಸ್ತಾನದ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿದೆ.
ಖಾನ್ ಬಂಧನದ ಬಳಿಕ ಪಾಕಿಸ್ತಾನದಾದ್ಯಂತ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಬೆಂಬಲಿಗರಿಂದ ಪ್ರತಿಭಟನೆ ಭುಗಿಲೆದ್ದಿದೆ. ಇಸ್ಲಾಮಾಬಾದ್ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಸೆಕ್ಷನ್ 144 ಜಾರಿಯಲ್ಲಿದ್ದು, ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.