ವಾಷಿಂಗ್ಟನ್ : ಪಾಕಿಸ್ತಾನಕ್ಕೆ ಭದ್ರತಾ ನೆರವನ್ನು ಸ್ಥಗಿತಗೊಳಿಸಿದ್ದ ಡೊನಾಲ್ಡ್ ಟ್ರಂಪ್ನ ಆದೇಶವನ್ನು ರದ್ದುಗೊಳಿಸಿ ಇದೀಗ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಫೈಟರ್ ಜೆಟ್ನ ಬಿಡಿ ಭಾಗಗಳನ್ನು ನೀಡಲು ಮುಂದಾಗಿದೆ.
ಆದರೆ ಇದು ಮಾರಾಟವಾಗಿದೆ, ಸಹಾಯ ಅಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ. ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಎಫ್-16 ಫೈಟರ್ ಜೆಟ್ ಪಡೆಯ ಸುಸ್ತಿರ ಕಾರ್ಯಕ್ರಮದ ಅಡಿಯಲ್ಲಿ 450 ಮಿಲಿಯನ್ ಡಾಲರ್(3,500 ಕೋಟಿ ರೂ.) ಮೊತ್ತದ ಸೇನಾ ನೆರವು ನೀಡುತ್ತಿರುವುದಾಗಿ ತಿಳಿಸಿತ್ತು.
ಇದು ಈಗಾಗಲೇ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ಎಫ್-16 ಫೈಟರ್ ಜೆಟ್ಗಳ ಬಿಡಿ ಭಾಗಗಳ ಮಾರಾಟವಾಗಿದೆ. ಸರ್ಕಾರ ಯಾವುದೇ ಸಹಾಯ ನೀಡಿಲ್ಲ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು, ನಾವು ಇತರ ದೇಶಗಳಿಗೆ ಒದಗಿಸಿದ ಸಾಧನಗಳಿಗೆ ಯಾವಾಗಲೂ ಬೆಂಬಲ ನೀಡುವುದು ಅಮೆರಿಕ ಸರ್ಕಾರದ ವಿಶ್ವವ್ಯಾಪಿ ನೀತಿಯಾಗಿದೆ.
ಪಾಕಿಸ್ತಾನದ ಬಗ್ಗೆ ಹೇಳಬೇಕೆಂದರೆ, ಇದು ಕೇವಲ ಬಿಡಿ ಭಾಗಗಳು ಹಾಗೂ ನಿರ್ವಹಣೆಯ ಪೂರೈಕೆಯಾಗಿದೆ. ಇದು ಮಾರಾಟವಾಗಿದ್ದು, ಯಾವುದೇ ಸಹಾಯವಲ್ಲ. ಈ ವಿಮಾನಗಳು ವಾಯು ಸುರಕ್ಷತೆಯ ಮಾನದಂಡಗಳನ್ನು ಪೂರೈಸಲು ರೆಕ್ಕೆ ಹಾಗೂ ಸಲಕರಣೆಗಳ ಸೇವೆಯನ್ನು ಒದಗಿಸಲು ಪ್ರಸ್ತಾಪಿಸಿದ್ದೇವೆ ಎಂದರು.