ಮಾಸ್ಕೋ : `ಸೆಕ್ಸ್ ತಂಪಾಗಿದೆ, ಆದ್ರೆ ಪುಟಿನ್ ಹತ್ಯೆ ಇನ್ನೂ ಉತ್ತಮವಾಗಿದೆ ಎನ್ನುವ ಬರಹ ಹೊಂದಿದ ಫೋಟೋ ಟ್ವೀಟ್ ಮಾಡಿದ್ದಕ್ಕೆ ಮಹಿಳೆಯೊಬ್ಬಳಿಗೆ ಭಾರೀ ದಂಡ ವಿಧಿಸಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
`ಸೆಕ್ಸ್ ಇಸ್ ಕೂಲ್, ಬಟ್ ಪುಟಿನ್ಸ್ ಡೆತ್ ಇಸ್ ಬೆಟರ್ ಆಕ್ಷೇಪಾರ್ಹ ಬರಹ ಹೊಂದಿದ್ದ ಕ್ಯಾರಿ ಬ್ಯಾಗ್ ಫೋಟೋವನ್ನ ಟ್ವೀಟ್ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಅಲೆಕ್ಸಾಂಡ್ರಾ ಎಂಬ ರಷ್ಯಾದ ಮಹಿಳೆಗೆ 30 ಸಾವಿರ ರುಬೆಲ್ಸ್ (ಅಂದಾಜು 25 ಸಾವಿರ ರೂ.) ದಂಡ ವಿಧಿಸಲಾಗಿದೆ.
ಆಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯ ಬಹುತೇಕ ಪೋಸ್ಟ್ಗಳು ಸ್ಕ್ರೀನ್ಶಾಟ್ ಆಧರಿಸಿದ ಪೋಸ್ಟ್ಗಳಾಗಿವೆ ಎಂದು ಹೇಳಿಕೊಂಡಿದ್ದಾಳೆ. ಕಳೆದ ಜೂನ್ 28ರಂದು ಅಲೆಕ್ಸಾಂಡ್ರಾಳನ್ನ ಆಂತರಿಕ ವ್ಯವಹಾರಗಳ ಸಚಿವಾಲಯದ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಕೆಯ ಇನ್ಸ್ಟಾಗ್ರಾಮ್ ಖಾತೆಯನ್ನ ಪರಿಶೀಲಿಸಿದಾಗ ಪುಟಿನ್ ವಿರುದ್ಧ ಹಾಕಲಾದ ಈ ಪೋಸ್ಟ್ನೊಂದಿಗೆ `ಯುದ್ಧ ಬೇಡ ಎಂಬ ಸಂದೇಶ ಹೊಂದಿರುವ ಬರಹಗಳೂ ಇದ್ದವು.
ವಿಚಾರಣೆ ಸಂದರ್ಭದಲ್ಲಿ ಆಕೆಯ ಕೈ ತೋಳುಗಳ ಮೇಲೆ ಹಾಕಿಸಿಕೊಂಡಿದ್ದ ಅಚ್ಚೆ ಗುರುತುಗಳನ್ನು ಪರಿಶೀಲಿಸುವ ಜೊತೆಗೆ ಅಧಿಕಾರಿಗಳು ಅದರ ಫೋಟೋಗಳನ್ನೂ ತೆಗೆದುಕೊಂಡಿದ್ದರು. ಆಕೆಯನ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಳಪಡಿಸಿದಾಗ ಲೈಂಗಿಕ ಸಂಬಂಧಗಳ ಪ್ರಚಾರ ಹಾಗೂ ಮಾನಹಾನಿ ಆರೋಪದ ಮೇಲೆ ಅಲ್ಲಿಯೂ ಆಕೆಗೆ 2 ಸಾವಿರ ಡಾಲರ್ (1.65 ಲಕ್ಷ ರೂ.) ದಂಡ ವಿಧಿಸಲಾಯಿತು.