Select Your Language

Notifications

webdunia
webdunia
webdunia
webdunia

ಕಣ್ಣಿನ ದೃಷ್ಟಿಯನ್ನು ಸುಧಾರಿಸುವುದಕ್ಕೆ ಮತ್ತು ಆರೋಗ್ಯಕ್ಕಾಗಿ ಸಲಹೆಗಳು...

ಕಣ್ಣಿನ ದೃಷ್ಟಿಯನ್ನು ಸುಧಾರಿಸುವುದಕ್ಕೆ ಮತ್ತು ಆರೋಗ್ಯಕ್ಕಾಗಿ ಸಲಹೆಗಳು...
ಬೆಂಗಳೂರು , ಮಂಗಳವಾರ, 19 ಜೂನ್ 2018 (14:12 IST)
ನಿಮ್ಮ ಕಣ್ಣುಗಳು ಜಗತ್ತಿಗೆ ನಿಮ್ಮ ಕಿಟಕಿಗಳಾಗಿವೆ. ಆದ್ದರಿಂದ ಅವುಗಳ ಆರೈಕೆ ಮಾಡುವುದು ಬಹುಮುಖ್ಯವಾಗಿದೆ. ನಿಮ್ಮ ಜೀವನ ಶೈಲಿ ಮತ್ತು ದೈನಂದಿನ ಒತ್ತಡವು ಕಣ್ಣುಗಳ ಸುಕ್ಕು, ಕೆಂಪು, ಶುಷ್ಕತೆ, ಕಪ್ಪು ವರ್ತುಲಗಳಿಗೆ ಕಾರಣವಾಗುತ್ತದೆ. ಇದು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ದೃಷ್ಟಿಯನ್ನು ಕಳೆದುಕೊಳ್ಳಲು ಕಾರಣವಾಗಬಹುದಾಗಿದೆ. ಆದ್ದರಿಂದ ನಿಮ್ಮ ಕಣ್ಣುಗಳನ್ನು ಉತ್ತಮವಾಗಿ ನೋಡಿಕೊಳ್ಳುವುದು ಅಗತ್ಯವಾಗಿದೆ.
*ಅಗತ್ಯವಿರುವ ಎಲ್ಲಾ ಖನಿಜಾಂಶಗಳು ಮತ್ತು ವಿಟಮಿನ್‌ಗಳನ್ನು ಸೇವಿಸಿ - ನೀವು ಸೇವಿಸುವ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಉದಾ: ಪಾಲಕ್, ಕ್ಯಾರೆಟ್, ಕೋಸು, ಮೆಂತೆ ಸೊಪ್ಪು ಇತ್ಯಾದಿ. ಅದರೊಂದಿಗೆ ಒಮೆಗಾ-3 ಕೊಬ್ಬಿನ ಆಮ್ಲಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಇವುಗಳು ಉತ್ತಮ ಆಹಾರಗಳಾಗಿದ್ದು ಜೀವಸತ್ವಗಳು, ಪೋಷಕಾಂಶಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಗಳ ಮೂಲವಾಗಿದೆ ಮತ್ತು ಹೆಚ್ಚಿನ ಕಣ್ಣಿನ ಸಮಸ್ಯೆಗಳು ಮತ್ತು ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
 
*ಯಾವಾಗಲೂ ಕಣ್ಣಿನ ರಕ್ಷಣೆಗೆ ಕನ್ನಡಕವನ್ನು ಬಳಸಿ - ನೀವು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಆಟಗಳನ್ನು ಆಡುತ್ತಿದ್ದರೆ ಕಣ್ಣಿಗೆ ಆಗಬಹುದಾದ ಗಾಯವನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ಪಾಲಿಕಾರ್ಬೋನೇಟ್‌ನಿಂದ ತಯಾರಿಸಿದ ಕಣ್ಣಿನ ರಕ್ಷಕವನ್ನು ಬಳಸಿ. ಅದು ಕಠಿಣವಾಗಿದ್ದು ನಿಮ್ಮ ಕಣ್ಣುಗಳನ್ನು ಅಪಘಾತದಿಂದ ರಕ್ಷಿಸುತ್ತದೆ.
 
*ಸನ್‌ಗ್ಲಾಸ್‌ಗಳನ್ನು ಬಳಸಿ - ಸನ್‌ಗ್ಲಾಸ್‌ಗಳನ್ನು ಕೇವಲ ಸ್ಟೈಲ್ ಅಥವಾ ನೋಡಲು ಅಂದವಾಗಿರಬೇಕೆಂದು ಧರಿಸುವುದಲ್ಲ. ಹಾನಿಕಾರಕ UVA ಮತ್ತು UVB ಕಿರಣಗಳಿಂದ ಕಣ್ಣನ್ನು ರಕ್ಷಿಸುವಲ್ಲಿ ಅದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಸೂರ್ಯನ ಕಿರಣಗಳಿಗೆ ತೆರೆದುಕೊಳ್ಳುವಿಕೆಯು ದೃಷ್ಟಿಗೆ ಸಂಬಂಧಿಸಿದ ದೋಷವನ್ನು ಉಂಟುಮಾಡುತ್ತದೆ. ಉದಾ: ಮಕ್ಯುಲರ್ ಡಿಜನರೇಶನ್ ಮತ್ತು ಕಣ್ಣಿನ ಪೊರೆ. ಆದ್ದರಿಂದ ಕನಿಷ್ಟ 99% UVA ಮತ್ತು UVB ಕಿರಣಗಳನ್ನು ನಿರ್ಬಂಧಿಸುವ ಸನ್‌ಗ್ಲಾಸ್‌ಗಳನ್ನು ಆಯ್ಕೆಮಾಡಿಕೊಳ್ಳಿ.
 
*ನಿಮ್ಮ ಕಣ್ಣುಗಳನ್ನು ಪದೇ ಪದೇ ಸ್ಪರ್ಷಿಸುವುದನ್ನು ತಪ್ಪಿಸಿ - ಪದೇ ಪದೇ ಕಣ್ಣನ್ನು ಉಜ್ಜಿಕೊಳ್ಳುವುದರಿಂದ ನಿಮ್ಮ ಕಣ್ಣುಗಳು ಸೋಂಕು ಉಂಟಾಗಬಹುದು. ನಿಮ್ಮ ಕಣ್ಣುಗಳಿಗೆ ಕಿರಿಕಿರಿ ಉಂಟುಮಾಡುವುದು ನಿಮ್ಮ ದೃಷ್ಟಿಗೆ ತೊಂದರೆಯನ್ನುಂಟುಮಾಡಬಹುದು. ಕಣ್ಣುಗಳನ್ನು ಸ್ಪರ್ಷಿಸುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕಣ್ಣನ್ನು ಜೋರಾಗಿ ರಬ್ ಮಾಡಬೇಡಿ. ಕಣ್ಣಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿದ್ದರೆ ಸ್ಟೆರೈಲ್ ಸಲೈನ್ ದ್ರಾವಣದಿಂದ ತೊಳೆದುಕೊಳ್ಳಿ.
 
*ನಿಮ್ಮ ಕುಟುಂಬದ ಕಣ್ಣಿನ ಆರೋಗ್ಯದ ಇತಿಹಾಸವನ್ನು ತಿಳಿದುಕೊಂಡಿರಿ - ವಯಸ್ಸು ಸಂಬಂಧಿತ ಮೆಕ್ಯುಲರ್ ಡಿಜನರೇಶನ್, ಗ್ಲುಕೋಮಾ, ರೆಟಿನಲ್ ಡಿಜನರೇಶನ್ ಮತ್ತು ಆಪ್ಟಿಕ್ ಎಟ್ರೋಫಿ ಮುಂತಾದ ಕೆಲವು ಕಣ್ಣಿನ ಸಮಸ್ಯೆಗಳು ಅನುವಂಶಿಕವಾಗಿದೆ. ಹಾಗಾಗಿ ನಿಮ್ಮ ಕುಟುಂಬದವರ ಕಣ್ಣಿನ ಆರೋಗ್ಯದ ಇತಿಹಾಸ ನಿಮಗೆ ತಿಳಿದಿದ್ದರೆ ಅದು ನಿಮಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
 
*ಕಣ್ಣಿನ ವೈದ್ಯರನ್ನು ಭೇಟಿಯಾಗಿ - ಸತತವಾಗಿ ತಲೆ ನೋವು, ಕಣ್ಣಿನಿಂದ ನೀರು ಸೋರುವಿಕೆ, ಸತತವಾದ ಉರಿಯೂತಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಿ.
 
ಈ ಉಪಯುಕ್ತ ಸಲಹೆಗಳನ್ನು ಬಳಸಿಕೊಂಡು ಉತ್ತಮ ಕಣ್ಣಿನ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗ ಅಂದ್ರೆ ಈ ನಟಿಯರಿಗೆ ಎಷ್ಟು ಇಷ್ಟ ನೋಡಿ.......