Select Your Language

Notifications

webdunia
webdunia
webdunia
webdunia

ಸುಂದರವಾದ, ಕಾಂತಿಯುತ ಮುಖವನ್ನು ನಿಮ್ಮದಾಗಿಸಿಕೊಳ್ಳಿ..

ಸುಂದರವಾದ, ಕಾಂತಿಯುತ ಮುಖವನ್ನು ನಿಮ್ಮದಾಗಿಸಿಕೊಳ್ಳಿ..
, ಮಂಗಳವಾರ, 19 ಜೂನ್ 2018 (14:17 IST)
ಕಪ್ಪಾದ ಮತ್ತು ಮಂದವಾದ ಚರ್ಮವು ಹಲವಾರು ಕಾರಣಗಳಿಂದ ಉಂಟಾಗಿರಬಹುದಾಗಿದೆ. ಉದಾ: ಸೂರ್ಯನ ಬೆಳಕಿಗೆ ಹೆಚ್ಚು ತೆರೆದುಕೊಳ್ಳುವುದು, ಮಾಲಿನ್ಯ, ಕಳಪೆ ಜೀವನ ಶೈಲಿಯ ಆಯ್ಕೆಗಳು, ವೈದ್ಯಕೀಯ ಪರಿಸ್ಥಿತಿ, ಒತ್ತಡ, ಇತ್ಯಾದಿ.

ತಿಳಿಯಾದ, ಕಾಂತಿಯುಕ್ತ ಬಣ್ಣವನ್ನು ಹೊಂದುವುದು ಹಲವು ಹುಡುಗಿಯರ ಕನಸಾಗಿದ್ದು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಕ್ರೀಂಗಳು ಮತ್ತು ಲೋಷನ್‌ಗಳು ದೊರೆಯುತ್ತವೆ. ಆದರೆ ರಾಸಾಯನಿಕ ಆಧಾರಿತ ಸೌಂದರ್ಯವರ್ಧಕಗಳ ಬಳಕೆಯು ನಿಮ್ಮ ಚರ್ಮಕ್ಕೆ ಹಾನಿ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಸುಲಭ ವಿಧಾನಗಳನ್ನು ಬಳಸಿ ನಿಮ್ಮ ಮುಖದ ಚರ್ಮವನ್ನು ಕಾಂತಿಯುಕ್ತವಾಗಿಸಿಕೊಳ್ಳುವಲ್ಲಿ ನಿಮ್ಮ ಗಮನವನ್ನು ನೀಡಿ.
 
*ಚೆನ್ನಾಗಿ ನಿದ್ದೆ ಮಾಡಿ: ಆಶ್ಚರ್ಯವಾದರೂ ಇದು ನಿಜ. ನಿಮ್ಮ ಚರ್ಮವು ಕಾಂತಿಯುತವಾಗಿರಲು ನಿಮ್ಮ ದೇಹಕ್ಕೆ 7-9 ಗಂಟೆಗಳ ನಿದ್ದೆಯ ಅವಶ್ಯಕತೆಯಿದೆ. ಒಳಗಿನಿಂದ ಚರ್ಮವು ಕಾಂತಿಯುಕ್ತವಾಗಲು ನೀವು ಸಾಕಷ್ಟು ನಿದ್ದೆ ಮಾಡುವ ಅಗತ್ಯವಿದೆ. ನೀವು ನಿದ್ದೆ ಮಾಡಿದಾಗ ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚುತ್ತದೆ ಮತ್ತು ಇದು ಚರ್ಮದ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ.
 
*ಅಗತ್ಯವಿರುವಷ್ಟು ನೀರನ್ನು ಕುಡಿಯಿರಿ: ಹೈಡ್ರೇಟೆಡ್ ಮತ್ತು ಹೊಳೆಯುವ ಚರ್ಮದ ಕಾಂತಿಯನ್ನು ಪಡೆಯಲು ನೀವು ಹೆಚ್ಚು ನೀರನ್ನು ಕುಡಿಯುವ ಅಗತ್ಯವಿದೆ. ನಿಮ್ಮ ಚರ್ಮದ ಟಾಕ್ಸಿನ್‌ಗಳನ್ನು ಹೊರಹಾಕುವುದರ ಮೂಲಕ ನಿಮ್ಮ ಚರ್ಮದ ವಿನ್ಯಾಸ ಮತ್ತು ನೋಟವನ್ನು ಉತ್ತಮಗೊಳಿಸುತ್ತದೆ. ಪ್ರತಿದಿನ ಕನಿಷ್ಟ 3-4 ಲೀಟರ್ ನೀರನ್ನು ಕುಡಿಯಬೇಕು.
 
*ಸನ್‌ಸ್ಕ್ರೀನ್ ಲೋಷನ್ ಬಳಸಿ: ನೀವು ಒಳಾಂಗಣದಲ್ಲಿರುವಾಗಲೂ ಸಹ ಸನ್‌ಸ್ಕ್ರೀನ್ ಲೋಷನ್ ಬಳಸಿ. ಅದು ಸೂರ್ಯನ ಕೆಟ್ಟ ವಿಕಿರಣಗಳಿಂದ ನಿಮ್ಮ ಚರ್ಮವನ್ನು ಕಾಪಾಡಲು ಸಹಾಯ ಮಾಡುತ್ತದೆ. ಸೂರ್ಯನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಯಾವಾಗಲೂ ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಂಪು ಕನ್ನಡಕ, ಕ್ಯಾಪ್ ಅಥವಾ ಸ್ಕಾರ್ಫ್ ಅನ್ನು ಇರಿಸಿಕೊಳ್ಳಿ.
 
*ನಿಮ್ಮ ಚರ್ಮವು ತೇವಾಂಶಯುಕ್ತವಾಗಿರುವಂತೆ ನೋಡಿಕೊಳ್ಳಿ: ಪ್ರತಿ ದಿನ ಎರಡು ಬಾರಿ ಮಾಯಿಶ್ಚರಾಯಿಸರ್ ಕ್ರೀಂ ಅಥವಾ ಫೇಸಿಯಲ್ ಎಣ್ಣೆಯನ್ನು ಬಳಸಿ. ಇದರಿಂದ ಶುಷ್ಕ ಚರ್ಮದ ಸಮಸ್ಯೆ ಹೋಗಲಾಡಿಸಬಹುದು.
 
*ನಿಮ್ಮ ಮುಖವನ್ನು ಜೇನು ಮತ್ತು ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ: ದಿನವೂ 2 ಚಮಚ ಆಲಿವ್ ಎಣ್ಣೆ ಮತ್ತು 1 ಚಮಚ ಜೇನನ್ನು ಬೆರೆಸಿ 2-3 ನಿಮಿಷ ಮುಖಕ್ಕೆ ಮಸಾಜ್ ಮಾಡಿ. ನಿಮಗೆ ಎಣ್ಣೆ ಚರ್ಮದ ಸಮಸ್ಯೆಯಿದ್ದರೆ ಅದಕ್ಕೆ 3-4 ಹನಿ ನಿಂಬೆ ರಸವನ್ನು ಬೆರೆಸಿಕೊಳ್ಳಿ. 5 ನಿಮಿಷದ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ಚರ್ಮವು ಬಿಳಿಯಾಗಿ ಕಾಂತಿಯುಕ್ತವಾಗಲು ಸಹಾಯ ಮಾಡುತ್ತದೆ.
 
*ಮುಖಕ್ಕೆ ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳಿ: ಇದು ನಿಮ್ಮ ಮುಖದ ಚರ್ಮದ ರಂಧ್ರಗಳನ್ನು ತೆರೆದು ಅಲ್ಲಿರುವ ಕೊಳೆಯನ್ನು ಶುದ್ಧೀಕರಿಸುತ್ತದೆ. ಆದರೆ ಕೇವಲ ನೀರನ್ನು ಬಳಸುವ ಬದಲು ಕುದಿಯುವ ನೀರಿಗೆ ಅರ್ಧ ನಿಂಬೆಯ ಹೋಳನ್ನು ಹಾಕಿ ಅದರ ಹಬೆಯನ್ನು ತೆಗೆದುಕೊಳ್ಳಬೇಕು. ನಂತರ ಮೆತ್ತಗಿನ ಟವೆಲ್‌ನಿಂದ ಮುಖವನ್ನು ಒರೆಸಿಕೊಳ್ಳಿ. ನಿಂಬೆಯಲ್ಲಿರುವ ವಿಟಮಿನ್ ಸಿ ನಿಮ್ಮ ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ.
 
*ತಂಪಾದ ರೋಸ್ ವಾಟರ್ ಬಳಸಿ: ರೋಸ್ ವಾಟರ್ ಊರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದು ನಿಮ್ಮ ಚರ್ಮದ ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ. ರೋಸ್ ವಾಟರ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ಅದು ನಿಮ್ಮ ಚರ್ಮವನ್ನು ತಾಜಾವಾಗಿಸುತ್ತದೆ ಮತ್ತು ಮೈಬಣ್ಣವನ್ನು ಹೆಚ್ಚಿಸುತ್ತದೆ. ಇದರ ಇನ್ನೊಂದು ಉತ್ತಮ ಗುಣವೆಂದರೆ ದಿನದ ಯಾವ ಸಮಯದಲ್ಲಾದರೂ ನೀವು ಇದನ್ನು ಮಾಡಬಹುದು.
 
*ಮನೆಯಲ್ಲೇ ತಯಾರಿಸಿದ ಫೇಸ್ ಪ್ಯಾಕ್ ಬಳಸಿ: ಸ್ವಲ್ಪ ಬೆಣ್ಣೆ, 2 ಚಮಚ ಬಾಳೆ ಹಣ್ಣಿನ ಪೇಸ್ಟ್ ಮತ್ತು 1 ಚಮಚ ಜೇನುತುಪ್ಪವನ್ನು ಬೆರೆಸಿ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 2 ನಿಮಿಷ ಮಸಾಜ್ ಮಾಡಿಕೊಳ್ಳಿ. ನಂತರ ಒದ್ದೆ ಬಟ್ಟೆಯನ್ನು ಬಳಸಿ ಅದನ್ನು ತೆಗೆದುಹಾಕಿ. ಈ ಪ್ಯಾಕ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
 
*ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್: ತಾಜಾ ಕಿತ್ತಳೆ ಹಣ್ಣಿನ ಸಿಪ್ಪೆಯ ಪ್ಯಾಕ್ ನಿಮ್ಮ ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ. ತಣ್ಣನೆಯ ಹಾಲನ್ನು ಬೆರೆಸಿ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ರುಬ್ಬಿ ಆ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಿ. ವಾರಕ್ಕೆ 2-3 ಬಾರಿ ಈ ಪ್ಯಾಕ್ ಮಾಡಿ ಹಚ್ಚಿಕೊಳ್ಳಿ.
 
*ಅಲೋವೆರಾ: 2 ಚಮಚ ಅಲೋವೆರಾ ಜೆಲ್, 1/2 ಚಮಚ ಅರಿಶಿಣ ಮತ್ತು 1 ಚಮಚ ಜೇನನ್ನು ಬೆರೆಸಿ ಆ ಮಿಶ್ರಣವನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ಚರ್ಮದ ಬಣ್ಣವನ್ನು ಹೆಚ್ಚಿಸುತ್ತದೆ ಮತ್ತು ಮುಖದ ಚರ್ಮ ಸುಕ್ಕಾಗುವುದನ್ನು ತಪ್ಪಿಸುತ್ತದೆ.
 
*ಸೌತೆಕಾಯಿ ಫೇಸ್ ಪ್ಯಾಕ್: ಸಿಪ್ಪೆ ತೆಗೆದ ಸೌತೆಕಾಯಿಯ ಚೂರು, ಗಂಧದ ಪುಡಿ ಮತ್ತು 1 ಚಮಚ ನಿಂಬೆರಸವನ್ನು ಸೇರಿಸಿ ರುಬ್ಬಿ ಒಂದು ಮಿಶ್ರಣವನ್ನು ತಯಾರಿಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದುಕೊಳ್ಳಿ. ಇದು ನಿಮ್ಮ ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ.
 
*ನೈಸರ್ಗಿಕವಾದ ಟೋನರ್ ಬಳಸಿ: ಒಂದೇ ಪ್ರಮಾಣದ ಆ್ಯಪಲ್ ಸೈಡರ್ ವಿನೆಗರ್ ಮತ್ತು ರೋಸ್ ವಾಟರ್ ಅನ್ನು ಬೆರೆಸಿ ಅದನ್ನು ಹತ್ತಿಯ ಉಂಡೆಗಳ ಮೂಲಕ ಮುಖಕ್ಕೆ ಹಚ್ಚಿಕೊಳ್ಳಿ. 2 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಿ. ಇದು ಮುಖದ ಚರ್ಮದಲ್ಲಿರುವ ಕಲ್ಮಶಗಳನ್ನು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಹಾಗೂ ಚರ್ಮವನ್ನು ಮೃದುವಾಗಿಸಿ ಕಾಂತಿಯುತವಾಗಿಸುತ್ತದೆ.
 
*ಎರಡು ದಿನಗಳಿಗೊಮ್ಮೆ ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕಿ: ಎರಡು ಚಮಚ ಅಕ್ಕಿ ಹಿಟ್ಟು ಮತ್ತು ಸ್ವಲ್ಪ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಆ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ರಬ್ ಮಾಡಿ. ಇದು ನಿಮ್ಮ ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಕಾಂತಿಯುತವಾಗಿಸುತ್ತದೆ.
 
ಈ ವಿಧಾನಗಳನ್ನು ನೀವು ಅತಿ ಕಡಿಮೆ ಸಮಯದಲ್ಲಿ ಅನುಸರಿಸಬಹುದಾಗಿದ್ದು ಸರಳವಾಗಿಯೂ ಇದೆ. ಹೀಗೆ ಸರಳವಾದ ವಿಧಾನಗಳನ್ನು ಬಳಸಿ ಸುಂದರ, ತಿಳಿಯಾದ ಮತ್ತು ಕಾಂತಿಯುತವಾದ ಮುಖದ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ದೃಷ್ಟಿಯನ್ನು ಸುಧಾರಿಸುವುದಕ್ಕೆ ಮತ್ತು ಆರೋಗ್ಯಕ್ಕಾಗಿ ಸಲಹೆಗಳು...