Select Your Language

Notifications

webdunia
webdunia
webdunia
webdunia

ಮರೆವಿನ ಖಾಯಿಲೆ ಇದ್ದವರು ಏನು ಮಾಡಬೇಕು ಎಂದು ನಿಮಗೆ ತಿಳಿದಿದೆಯೇ

ಮರೆವಿನ ಖಾಯಿಲೆ ಇದ್ದವರು ಏನು ಮಾಡಬೇಕು ಎಂದು ನಿಮಗೆ ತಿಳಿದಿದೆಯೇ
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (18:59 IST)
ಮನುಷ್ಯನಿಗೆ ಮರೆವು ವರವೂ ಹೌದು. ಶಾಪವೂ ಹೌದು. ಕೆಲವು ಫಟನೆಗಳನ್ನು ಮರೆತರೆ ಚೆನ್ನ. ಇನ್ನು ಕೆಲವನ್ನು ನೆನಪಿಸಿಕೊಳ್ಳುವುದೇ ಮನಸ್ಸಿಗೆ ಹಿತ. ಈ ಜಗತ್ತಿನಲ್ಲಿ ನೆನಪು ಎನ್ನುವ ಪರಿಕಲ್ಪನೆಯೇ ಇಲ್ಲದೇ ಹೋಗಿದ್ದರೆ ಹೇಗಿರುತ್ತಿತ್ತು? ಒಮ್ಮೆ ಯೋಚಿಸಿ. ಮಕ್ಕಳು ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುತ್ತಿತ್ತೇ? ಮನುಷ್ಯರು ಒಬ್ಬರನ್ನೊಬ್ಬರನ್ನು ಗುರುತಿಸುತ್ತಿದ್ದರೇ? ಹಾಗಾದರೆ ನೆನಪು ಎನ್ನುವುದು ಮನುಷ್ಯ ಜೀವಿಗೆ ಬಹಳ ಪ್ರಮುಖವಾದ ಸಂಗತಿ ಎಂದಾಯಿತು. 
ಅದಕ್ಕೆ ನೆನಪಿನ 'ಶಕ್ತಿ' ಎಂದು ಹೇಳುವುದು. ವಯಸ್ಸಾದಂತೆ ನೆನಪಿನ ಶಕ್ತಿಯು ಕ್ಷೀಣಿಸುತ್ತಾ ಬರುತ್ತದೆ. ಆದರೆ ಈಗಿನ ವಿದ್ಯಮಾನದಲ್ಲಿ ಖಿನ್ನತೆ, ಟೆನ್ಶನ್, ನಿದ್ದೆ ಕಡಿಮೆ ಮಾಡುವುದು, ಮಧ್ಯಪಾನ ಇವೆಲ್ಲದರಿಂದ ಮರೆವಿನ ಖಾಯಿಲೆ ಬರುತ್ತದೆ. ಈ ಖಾಯಿಲೆಯು ಸಾಂಕ್ರಾಮಿಕವೂ ಅಲ್ಲ. ಆನುವಂಶಿಯವೂ ಅಲ್ಲ. ಆದರೂ ಇದು ಸರ್ವೇ ಸಾಮಾನ್ಯವಾದ ರೋಗವಾಗಿದೆ. 
 
ಈ ಸಮಸ್ಯೆಗೆ ಏನು ಮಾಡಬೇಕು
 
* ಲಿಸ್ಟ್ ಮಾಡಿಕೊಳ್ಳಿ : ಮರೆಗುಳಿತನದ ಸಮಸ್ಯೆ ಇರುವವರು ಮೊದಲೇ ಲಿಸ್ಟ್ ಮಾಡಿಕೊಳ್ಳುವುದು ಉತ್ತಮವಾದ ಪರಿಹಾರವಾಗಿದೆ. ಇದರಿಂದ ನಾವು ಮರೆತರೂ ಲಿಸ್ಟ್ ನೋಡಿದರೆ ಮತ್ತೆ ನೆನಪಾಗುತ್ತದೆ.
 
* ಮೊಬೈಲ್‌ನಲ್ಲಿ ಜ್ಞಾಪನೆಗಳನ್ನು ಹಾಕಿಕೊಳ್ಳುವುದು : ಏನನ್ನು ಬಿಟ್ಟರೂ ಮೊಬೈಲ್ ಅನ್ನು ಕೈ ಬಿಡದ ಈಗಿನ ದಿನಗಳಲ್ಲಿ ನಾವು ಜ್ಞಾಪನೆಗಳನ್ನು ಹಾಕಿಕೊಳ್ಳುವುದರಿಂದ ಸುಲಭವಾಗಿ ಜ್ಞಾಪಿಸಿಕೊಳ್ಳಬಹುದು. ಇದರಲ್ಲಿ ಯಾವ ಸಮಯಕ್ಕೆ ಬೇಕಾದರೂ ನಾವು ಜ್ಞಾಪನೆಯನ್ನು ಸೆಟ್ ಮಾಡಿಕೊಳ್ಳಬಹುದಾಗಿದೆ.
 
* ಆದಷ್ಚು ಯೋಗ, ಧ್ಯಾನಗಳನ್ನು ಮಾಡುವುದು : ಯೋಗದಿಂದ ಎಷ್ಟೋ ಗುಣಪಡಿಸಲಾಗದ ರೋಗಗಳನ್ನು ಶಮನ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಯೋಗ, ಧ್ಯಾನಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬಹುದು. ಇದರಿಂದ ಜ್ಞಾಪಕ ಶಕ್ತಿಯೂ ಹೆಚ್ಚುತ್ತದೆ.
 
* ಮನಸ್ಸನ್ನು ಉಲ್ಲಾಸದಿಂದ ಇರಿಸಿಕೊಳ್ಳುವುದು : ಎಲ್ಲಕ್ಕೂ ಮನಸ್ಸೇ ಮೂಲ ಎಂದು ಹೇಳುತ್ತಾರೆ. ಮನಸ್ಸನ್ನು ಸಂತೋಷವಾಗಿರಿಸಿಕೊಳ್ಳುವುದೂ ಸಹ ಒಂದು ಕಲೆ. ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಕಾಲ ಕಳೆಯುವುದರಂದ ಮನಸ್ಸಿಗೆ ಹಿತ ಎನಿಸುತ್ತದೆ. ಇದರಂದ ಮರೆವಿನ ಖಾಯಿಲೆಯು ದೂರವಾಗುತ್ತದೆ.
 
* ಚೆನ್ನಾಗಿ ನಿದ್ದೆ ಮಾಡಬೇಕು : ಒಂದು ಒಳ್ಳೆಯ ನಿದ್ದೆಯಿಂದ ಬಹಳ ಪ್ರಯೋಜನಗಳಿವೆ. ನಿದ್ದೆಯು ಎಲ್ಲಾ ಅಂಗಾಗಗಳಿಗೆ ವಿಶ್ರಾಂತಿಯನ್ನು ನೀಡುವುದಲ್ಲದೇ ಮತ್ತೆ ಪುನಃ ಚೈತನ್ಯದಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಇದರಿಂದ ಮೆದುಳು ಚುರುಕಾಗುತ್ತದೆ. ಆಗ ಮರೆವಿನ ಖಾಯಿಲೆಯು ಕಡಿಮೆಯಾಗುವುದು.
 
ಮರೆವಿನ ಖಾಯಿಲೆಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದಲೂ ನಾವು ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇವುಗಳು ಮೆದುಳಿನ ಶಕ್ತಿ ಹೆಚ್ಚಿಸುವುದರೊಂದಿಗೆ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳುವಲ್ಲಿ ನೆರವಾಗುತ್ತದೆ. ಅವು ಯಾವುದೆಂದು ನೋಡೋಣ
 
* ಒಣ ಹಣ್ಣುಗಳು : ವಾಲ್‌ನಟ್, ಬಾದಾಮಿ ಬೀಜಗಳಂತಹ ಒಣ ಹಣ್ಣುಗಳು ಸ್ಮರಣೆ ಶಕ್ತಿ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತವೆ. ಇವುಗಳಲ್ಲಿರುವ ಒಮೆಗಾ-3, ಕೊಬ್ಬಿನ ಆಮ್ಲಗಳು, ಪ್ರೋಟೀನ್‌ಗಳು ಮೆದುಳಿನ ಕೋಶಗಳನು ಲವಲವಿಕೆಯಿಂದ ಇರುವಂತೆ ಮಾಡುತ್ತವೆ. 
 
* ಹಸಿರು ಎಲೆಯುಕ್ತ ತರಕಾರಿಗಳು : ಬಸಳೆ, ಕೋಸು, ಕೊಲ್ಲಾರ್ಡ್ಸ್‌ನಂತಹ ಹಸಿರುಯುಕ್ತ ತರಕಾರಿಗಳನ್ನು ಆಹಾರ ಶೈಲಿಯಲ್ಲಿ ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕ ಶಕ್ತಿಯೂ ಸಹ ವೃದ್ಧಿಯಾಗುತ್ತದೆ. ಅದಲ್ಲದೇ ಹೆಚ್ಚು ಹಸಿರುಯುಕ್ತ ತರಕಾರಿಗಳನ್ನು ಸೇವಿಸುವುದರಿಂದ ಬುದ್ಧಿಮಾಂದ್ಯತೆಯಿಂದಲೂ ದೂರವಿರಬಹುದು.
 
* ಚಾಕಲೇಟ್ : ಡಾರ್ಕ್ ಚಾಕೋಲೇಟ್‌ಗಳು ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಹೇಳಿ ಮಾಡಿಸಿದಂತಹ ಆಹಾರವಾಗಿದೆ. ಇದು ದೇಹದಲ್ಲಿ ರಕ್ತದ ಪರಿಚಲನೆಯನ್ನು ಸುಧಾರಿಸುವುದಲ್ಲದೇ ಮೆದುಳಿಗೆ ರಕ್ತವು ಸರಾಗವಾಗಿ ಸಾಗುವಂತೆ ಮಾಡುತ್ತವೆ. 
 
* ಸೇಬು : ದಿನಕ್ಕೊಂದು ಸೇಬು ತಿಂದು ವೈದ್ಯರನ್ನು ದೂರವಿರಿಸಿ ಎನ್ನುವ ಮಾತು ಅಕ್ಷರಶಃ ನಿಜ. ಕೆಂಪು ಸೇಬಿನಲ್ಲಿರುವ ಕೆಲವು ವರ್ಗದ ರಾಸಾಯನಿಕಗಳು ಅಲ್ಝೆಮರ್ ಮತ್ತು ಪರ್ಕಿಸನ್ ಎನ್ನುವ ಮರೆಗುಳಿ ಖಾಯಿಲೆಗಳಿಂದ ಮೆದುಳನ್ನು ರಕ್ಷಿಸುತ್ತವೆ. 
 
* ಒಣದ್ರಾಕ್ಷಿ : ಒಣದ್ರಾಕ್ಷಿಯಲ್ಲಿ ಬೊರೊನ್ ಎನ್ನುವ ಅಂಶವಿದ್ದು ಇದು ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. 
 
* ದಾಲ್ಚಿನಿ ಮತ್ತು ಜೇನುತುಪ್ಪ : ರಾತ್ರಿ ನಿದ್ದೆ ಮಾಡುವ ಮುನ್ನ ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ದಾಲ್ಚಿನಿ ಪುಡಿ ಸೇರಿಸಿ ತಿನ್ನುವುದರಿಂದ ಮರೆವಿನ ಖಾಯಿಲೆ ದೂರವಾಗುತ್ತದೆ.
 
* ಒಂದೆಲಗದ ಎಲೆ : ಒಂದೆಲಗದ ಎಲೆಯನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯದಲ್ಲಿ ಚೇತರಿಕೆ ಆಗುವುದರ ಜೊತೆಗೆ ನೆನಪಿನ ಶಕ್ತಿಯ ಸಮಸ್ಯೆಯನ್ನು ತಡೆಗಟ್ಟುತ್ತದೆ.
 
ಮನುಷ್ಯ ಜೀವಿಯ ರಚನೆಯೇ ವಿಭಿನ್ನವಾದ ರಚನೆ. ಅಸಾಮಾನ್ಯವಾದ ಬುದ್ಧಿಮತ್ತೆಯಿಂದಲೇ ಈ ಜೀವಿಯು ವಿಭಿನ್ನನೆನಿಸಿದ್ದಾನೆ. ಆದರೆ ಅಂತಹ ಬುದ್ಧಿಮತ್ತೆಗೆ, ಸ್ಮರಣ ಶಕ್ತಿಗೇ ಖಾಯಿಲೆ ಬಂದರೆ ಹೇಗಾಗುತ್ತದೆ ಅಲ್ಲವೇ. ದೇಹದ ಪ್ರತಿಯೊಂದು ಭಾಗವನ್ನೂ ನಿಯಂತ್ರಿಸುವ ಸ್ವಿಚ್‌ನಂತಿರುವ ಮೆದುಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಎಂತಹ ಪರಿಸ್ಥಿತಿಯಲ್ಲಿಯೂ ನಾವು ವೈದ್ಯರ ಸಲಹೆಯಿಲ್ಲದೇ ನಮ್ಮ ಆರೋಗ್ಯದ ಮೇಲೆ ಪ್ರಯೋಗಗಳನ್ನು ಮಾಡಬಾರದು. ಅದರಲ್ಲಿಯೂ ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳು ಇತ್ತೀಚೆಗೆ ಜಾಸ್ತಿ ಆಗಿರುವುದರಿಂದ ಆದಷ್ಟು ಆರೋಗ್ಯದ ಕಡೆಗೆ ಗಮನ ಹರಿಸಿ ಸೂಕ್ತ ಕಾಲದಲ್ಲಿ ವೈದ್ಯರ ಸಲಹೆಗಳನ್ನು ಪಡೆಯುತ್ತಾ ಉತ್ತಮವಾದ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳೋಣ.  

Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ರೋಸ್ ವಾಟರ್..!!