ಬೆಂಗಳೂರು: ಆಡಳಿತದಲ್ಲಿ ಸ್ವಚ್ಛತೆ ಮತ್ತು ಪಾರದರ್ಶಕತೆ ತರುವ ಉದ್ದೇಶದಿಂದ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ನ್ನು ಜಾರಿಗೆ ತರಲಾಯಿತು. ಇದರಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.
ಮಾಹಿತಿ ಹಕ್ಕು ಕಾಯಿದೆಯ ಅನ್ವಯ ಯಾವ ನಾಗರಿಕರೂ ಸಾರ್ವಜನಿಕ ಪ್ರಾಧಿಕಾರದಿಂದ ಬೇಕಾದ ಮಾಹಿತಿಯನ್ನು ಕೋರಬಹುದು. ಕೇಳಿದ ಮಾಹಿತಿಗೆ ಆಯಾ ಪ್ರಾಧಿಕಾರವು ತ್ವರಿತವಾಗಿ ಉತ್ತರ ನೀಡಬೇಕು. ಮೂವತ್ತು ದಿನಗಳೊಳಗಾಗಿ ಉತ್ತರ ನೀಡುವುದು ಕಡ್ಡಾಯವಾಗಿರುತ್ತದೆ.
ಆದರೆ ಕೆಲವೊಂದು ದೇಶದ ಭದ್ರತೆ ಮತ್ತು ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ ಕೆಲವೊಂದು ಗೌಪ್ಯ ಮಾಹಿತಿಯನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳ ಮಾಹಿತಿಯನ್ನು ನಾಗಕರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಯಾರು ಅರ್ಹರು?
ಭಾರತದ ನಾಗರಿಕರಾಗಿರಬೇಕು
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧೀನದ ಯಾವುದೇ ಪ್ರಾಧಿಕಾರದಿಂದ ಮಾಹಿತಿ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಸ್ಪಷ್ಟವಾಗಿ ಕೈ ಬರಹದಲ್ಲಿ ಅಥವಾ ಟೈಪ್ ಮಾಡಿ ಬರೆಯಬಹುದು. ಅದನ್ನು ಸಂಬಂಧಪಟ್ಟ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕೊಡಬೇಕು. ಜೊತೆಗೆ ನಿಮ್ಮ ಹೆಸರು, ವಿಳಾಸವನ್ನೂ ನಮೂದಿಸಿರಬೇಕು.
ಅರ್ಜಿ ಶುಲ್ಕವಾಗಿ 10 ರೂ.ಗಳನ್ನು ಸಲ್ಲಿಸಬೇಕು. ಆದರೆ ಬಿಪಿಎಲ್ ಕಾರ್ಡ್ ದಾರರಾಗಿದ್ದರೆ ಉಚಿತವಾಗಿ ಅರ್ಜಿ ಸಲ್ಲಿಸಬಹದು. ಇದಕ್ಕೆ ಬಿಪಿಎಲ್ ಕಾರ್ಡ್ ದಾಖಲೆ ಸಲ್ಲಿಸಬೇಕು. ಶುಲ್ಕವನ್ನು ಡಿಮ್ಯಾಂಡ್ ಡರಾಫ್ಟ್ ಅಥವಾ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಪಾವತಿ ಮಾಡಬಹುದು.
ಅರ್ಜಿಯನ್ನು ನೇರವಾಗಿ ಸಂಬಂಧಪಟ್ಟ ಮಾಹಿತಿ ಅಧಿಕಾರಿಗಳಿಗೆ ನೀಡಬಹುದು ಅಥವಾ ಅಂಚೆ ಮೂಲಕವೂ ಕಳುಹಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಒಂದು ಸ್ವೀಕೃತಿ ನಂಬರ್ ಸ್ವೀಕರಿಸುತ್ತೀರಿ. ಇದು ನಿಮ್ಮ ಅರ್ಜಿಯ ಸ್ಥಿತಿಗತಿ ತಿಳಿಯಲು ಉಪಯುಕ್ತವಾಗಿದೆ. ಮಾಹಿತಿ ಅಸ್ಪಷ್ಟವಾಗಿದ್ದರೆ, ಕಾಲ್ಪನಿಕ ಪ್ರಶ್ನೆಗಳಾಗಿದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆಯಿದೆ.