Select Your Language

Notifications

webdunia
webdunia
webdunia
webdunia

ಆಡು ಭಾಷೆಯೋ – ಆಡಳಿತ ಭಾಷೆಯೋ?

ಆಡು ಭಾಷೆಯೋ – ಆಡಳಿತ ಭಾಷೆಯೋ?
ಬೆಂಗಳೂರು , ಗುರುವಾರ, 14 ಫೆಬ್ರವರಿ 2019 (15:28 IST)
ಸುಷ್ಮಾ ವಿಕ್ರಮ್
 
ನವೆಂಬರ್ ತಿಂಗಳು ಬಂತೆಂದರೆ ಸಾಕು ಸರ್ಕಾರ, ಕನ್ನಡಪರ ಸಂಘಟನೆಗಳು ಎಲ್ಲವೂ ಚುರುಕಾಗಿ ರಾಜ್ಯೋತ್ಸವ ಸಭೆ, ಸಮಾರಂಭಗಳಿಗೆ ತಯಾರಾಗುತ್ತವೆ. ಹಾಗೆಯೇ ಆಡಳಿತ ಭಾಷೆ ಕನ್ನಡವಾಗಬೇಕು ಎನ್ನುವ ಕೂಗು ಮುಗಿಲು ಮುಟ್ಟಿ ಸರ್ಕಾರಿ ಕಛೇರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಪ್ರಾರಂಭವಾಗುತ್ತದೆ.  “ಕನ್ನಡ ಉಳಿಸಿ, ಕನ್ನಡ ಬೆಳೆಸಿ” ಎನ್ನುವ ಕೂಗು ತಾರಕಕ್ಕೇರುತ್ತದೆ.
“ಆನೇನೇ ಹೋಯ್ತು, ಆನೆ ಬಾಲಕ್ಕೆ ಒದ್ದಾಡಿದ್ರು” ಅನ್ನೋ ಹಾಗೆ, ಆಡಳಿತ ಭಾಷೆಗೇನೆ ಹೆಚ್ಚು ಒತ್ತು ಕೊಡುತ್ತಾ ಬರುತ್ತಿದ್ದಾರೆ. ಆದರೆ ವಾಸ್ತವವಾಗಿ ಕನ್ನಡ ಆಡಳಿತ ಭಾಷೆಯಾಗಿ ಸ್ವಲ್ಪಮಟ್ಟಿಗೆ ಜೀವಂತವಾಗಿದ್ದರೂ ಸಹ ಆಡುಭಾಷೆಯಾಗಿ ಎಲ್ಲಿಯೂ ಬಳಕೆಯಾಗುತ್ತಿಲ್ಲ.
 
ಬೆಂಗಳೂರು ಕರ್ನಾಟಕ ರಾಜ್ಯದ ರಾಜಧಾನಿಯಾಗಿದ್ದು, ರಾಜ್ಯದ ಜನಸಂಖ್ಯೆಯ ಬಹುಪಾಲು ಜನರು ರಾಜಧಾನಿಯಲ್ಲಿದ್ದಾರೆ. ಹಾಗೆಯೇ ಇಲ್ಲಿಗೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಂದುಹೋಗುವ ಸಂಖ್ಯೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಕನ್ನಡ ಆಡು ಭಾಷೆಯಾಗಿ ಉಳಿಯದೇ ಇರುವುದು ಒಂದು ಶೋಚನಿಯ ಸಂಗತಿಯೇ ಸರಿ. ಯಾವುದೇ ದಿನಸಿ ಅಂಗಡಿಗಳು, ಮಾಲ್‌ಗಳು, ಮಾರ್ಟ್‌ಗಳು, ಹೋಟೆಲ್‌ನಲ್ಲಿ ಪದಾರ್ಥಗಳ ಬಳಕೆ ಕೇವಲ ಇಂಗ್ಲೀಷ್‌ನಲ್ಲಿ ಬಳಕೆಯಾಗುತ್ತಿದ್ದು, ಕನ್ನಡದ ಸೊಗಡೇ ಮಾಯವಾದಂತಿದೆ. ಹಾಗೆಯೇ ಎಲ್ಲಾ ದಿನಸಿ ಅಂಗಡಿಗಳಲ್ಲಿ Green gram, Dhal, Bergal gram, Horse gram, Pepper, Tamarind, Jaggery…  ಈ ರೀತಿ ಪದಗಳು ಬಳಕೆಯಾಗುತ್ತಿದೆಯೇ ಹೊರತು ಹೆಸರುಕಾಳು, ತೊಗರಿಬೇಳೆ, ಕಡಲೇಕಾಳು, ಮೆಣಸು, ಹುಣಸೇಹಣ್ಣು ಎಂಬ ಕನ್ನಡ ಪದಗಳು ಮಾಯವಾಗುತ್ತಿವೆ. ಹೀಗೆಯೇ ತರಕಾರಿ ಮತ್ತು ಹಣ್ಣುಗಳ ಅಂಗಡಿಗಳಲ್ಲಿ ಇಂಗ್ಲೀಷಿನಲ್ಲಿ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ.
 
ಇನ್ನು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಂತೂ ಹೋದರೆ Menu Card ತಂದವರ ಜೊತೆ ಕೂಡ ನಾವು ಇಂಗ್ಲೀಷಿನಲ್ಲಿಯೇ ಮಾತನಾಡುತ್ತೇವೆ. ಇಂಗ್ಲೀಷಿನಲ್ಲಿ ಮಾತನಾಡಿದರೆ ಏನೋ ಒಂದು ರೀತಿಯ ಹೆಮ್ಮೆ ಎಂದು ಭಾವಿಸುತ್ತೇವೆ. ಆದರೆ ನಮ್ಮ ತಾಯಿ ಭಾಷೆಯಾದ ಕನ್ನಡವನ್ನೇ ಎರಡನೇ ಆಯ್ಕೆಯಾಗಿ ನಾವೇ ಮಾಡಿಕೊಳ್ಳುತ್ತೇವೆ. ಇದು ಎಷ್ಟು ಅವಮಾನಕರ ವಿಷಯವಲ್ಲವೇ? ನಮ್ಮ ಎದುರಿರುವ ವ್ಯಕ್ತಿಗೂ ಕನ್ನಡ ಗೊತ್ತು ಕನ್ನಡ ಮಾತನಾಡಲು ಬರುತ್ತದೆ ಎಂದು ಗೊತ್ತಿದ್ದರೂ ನಾವು ಎಂದಿಗೂ ಕನ್ನಡದಲ್ಲಿ ಅವರ ಜೊತೆ ಮಾತನಾಡಲು ಮುಂದಾಗುವುದೇ ಇಲ್ಲ. ಇದು ಮ್ಮಿಂದ ಶುರುವಾಗಬೇಕೇ ಹೊರತು, ಬೇರೆಯವರಿಂದ ಅಪೇಕ್ಷೆ, ನಿರೀಕ್ಷೆ ಪಡುವಂತದ್ದಲ್ಲ. ಬಹಳಷ್ಟು ಕನ್ನಡಪರ ಸಂಘಟನೆಗಳು ಕನ್ನಡಪರ ಹೋರಾಡುತ್ತಿದ್ದರೂ ಸಹ, ಎಲ್ಲಿ ಕನ್ನಡದ ಬಳಕೆಯಾಗಬೇಕು, ಎಲ್ಲಿ ಕನ್ನಡಕ್ಕೆ ಧಕ್ಕೆ ಬಂದಿದೆ ಎಂಬುದನ್ನು ತಿಳಿದು ಅಲ್ಲಿ ಕನ್ನಡದ ಪರ ಸತತವಾಗಿ ಹೋರಾಡಬೇಕೇ ಹೊರತು, ಇದು ಕೇವಲ ನವೆಂಬರ್ ತಿಂಗಳಿನಲ್ಲಿ ನಡೆದರೆ ಮಾತ್ರ ಸಾಲದು. ಮಿಗಿಲಾಗಿ ಪ್ರತಿಯೊಬ್ಬ ಕನ್ನಡಿಗನೂ ಸಹ ತನ್ನ ಮನೆಯಲ್ಲಿ ತನ್ನ ಮಕ್ಕಳಿಗೆ ಕನ್ನಡ ಬಗ್ಗೆ ಆಸಕ್ತಿ ತೋರುವಂತೆ ಸಹಾಯ ನೀಡಿ ಪ್ರೋತ್ಸಾಹಿಸಬೇಕು. ಇದು ನಾವು ನೀವೆಲ್ಲರೂ ಕಡ್ಡಾಯವಾಗಿ ಮಾಡಲೇಬೇಕಾದ ಕೆಲಸವಾಗಿದೆ.
 
ನಮ್ಮ ಕನ್ನಡ ಸಾಹಿತ್ಯ ಬಹಳಷ್ಟು ವಿಸ್ತಾರವಾಗಿದೆ. ಭಾವಗೀತೆಗಳು, ಮಂಕುತಿಮ್ಮನ ಕಗ್ಗ, ಕಾದಂಬರಿಗಳು, ಇಷ್ಟೇ ಅಲ್ಲದೇ ಬಸವಣ್ಣ, ಅಕ್ಕಮಹಾದೇವಿ, ದಾಸ ಸಾಹಿತ್ಯ ಹೀಗೆ ಹತ್ತು ಹಲವಾರು ಸಾಹಿತ್ಯಗಳು ನಮ್ಮಲ್ಲಿ ಹೇರಳವಾಗಿ ಇದ್ದರೂ, ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳದೇ ಇರುವ ಘೋರ ಪರಿಸ್ಥಿತಿ ನಮ್ಮದಾಗಿದೆ. ಹಾಗೆಯೇ ದೇಶದಲ್ಲಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿದ್ದರೂ ಅವನತಿಯ ಹಾದಿಯನ್ನು ಹಿಡಿಯುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.
 
ಈ ಎಲ್ಲಾ ಕನ್ನಡ ಸಾಹಿತ್ಯದ ಬಗೆಗಿನ ವಿಚಾರಗಳನ್ನು ನಮ್ಮ ಹೊಸ ಪೀಳಿಗೆಯ ಮಕ್ಕಳಿಗೆ ತಿಳಿಸಿ. ಅವರಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಿದರೆ, ನಾನೇ ಕನ್ನಡವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದಹಾಗೆ ಆಗುತ್ತದೆ. ಆ ಹೆಮ್ಮೆಯೂ ಕೂಡ ನಮಗಿರುತ್ತದೆ.
 
ಇನ್ನೂ ಶಾಲಾ-ಕಾಲೇಜುಗಳ ಪರಿಸ್ಥಿತಿಯೋ ಹೇಳತೀರದು. ಅಷ್ಟೇ ಏಕೆ, ಮಕ್ಕಳು ಶಾಲೆಯಲ್ಲಿಯೂ, ಮನೆಯ ಒಳಗೆ, ಹೊರಗೆ, ಆಟ ಆಡುವಾಗ ಬೇರೆ ಮಕ್ಕಳ ಜೊತೆ ಮಾತನಾಡುವಾಗ ಇಂಗ್ಲೀಷ್ ಭಾಷೆಯ ಸುರಿಮಳೆಯೇ ಸರಿ. ದೊಡ್ಡವರಾಗಿ ನಾವು ಸಹ ಒಂದು ದಿನವೂ ಅದನ್ನು ಸರಿಪಡಿಸಲು ಮುಂದಾಗುವುದಿಲ್ಲ. ಇದು ಮತ್ತೊಂದು ಶೋಚನೀಯ ಸಂಗತಿಯಾಗಿದೆ.
 
ಹೀಗಿರುವಾಗ “ಕನ್ನಡ ಉಳಿಸಿ, ಕನ್ನಡ ಬೆಳೆಸಿ” ಎನ್ನುವ ಹೇಳಿಕೆಗೆ ನಾವೇ ತಣ್ಣೀರೆರಚುವಂತಾಗಿದೆ. ಕಡೆಯ ಪಕ್ಷ ಈ ರಾಜ್ಯೋತ್ಸವದ ಸಮಯದಲ್ಲಾದರೂ ಸರ್ಕಾರ, ಜನತೆ, ಕನ್ನಡಪರ ಸಂಘಟನೆಗಳು ವ್ಯವಹಾರಿಕ ಭಾಷೆ/ಆಡುಭಾಷೆಗೆ ಒತ್ತುಕೊಟ್ಟು ಎಲ್ಲೆಡೆ ಕನ್ನಡ ಪದಗಳ ಬಳಕೆ ಕಡ್ಡಾಯ ಮಾಡುವುದಲ್ಲದೇ, ಕನ್ನಡದಲ್ಲಿಯೇ ಮಾತನಾಡಲು ಹೆಚ್ಚು ಹೊತ್ತು ಕೊಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ಕೇವಲ ಪಂಡಿತರ ಭಾಷೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.
 
ನಮ್ಮ ಮಕ್ಕಳಿಗೆ ನಾವೇ ಕನ್ನಡ ಮಹತ್ವ, ಅರಿವು, ಘನತೆ, ಶ್ರೇಷ್ಠತೆ, ಹೆಮ್ಮೆಯ ಭಾವವನ್ನು ಮೂಡಿಸಬೇಕೇ ಹೊರತು, ಬೇರೆಯವರಿಂದ ಅದನ್ನು ಅಪೇಕ್ಷಿಸುವುದು ಹೆತ್ತ ತಾಯಿಯ ಬಗ್ಗೆ ಬೇರೊಬ್ಬರಿಂದ ತಾಯಿಯ ಮಹತ್ವವನ್ನು ನಾವೇ ತಿಳಿದುಕೊಂಡಂತಾಗುತ್ತದೆ.
 
ಮೊದಲನೆಯದಾಗಿ ಹಾಗೂ ಕೊನೆಯದಾಗಿ ಒಂದು ಮಾತೆಂದರೆ “ಕನ್ನಡದಲ್ಲಿ ಮಾತನಾಡುವುದು, ಕನ್ನಡದಲ್ಲಿ ವ್ಯವಹರಿಸುವುದು”, “ಕನ್ನಡ ಪದಗಳ ಬಳಕೆ ಇವೆಲ್ಲವೂ ಹೆಮ್ಮೆಯ ಮಹತ್ತರ ವಿಷಯವೇ ಹೊರತು ನಾವು ಅವಮಾನ ಪಡುವ ಸಂಗತಿ ಖಂಡಿತ ಅಲ್ಲ” ಎಂದು ನಾವು ಸದಾ ನೆನಪಿನಲ್ಲಿಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಪುಳಿಯೋಗರೆ ಪ್ಯಾಕೆಟ್ ನಲ್ಲಿ ಏನಿತ್ತು ಗೊತ್ತಾ?