Select Your Language

Notifications

webdunia
webdunia
webdunia
webdunia

ಥೈಲ್ಯಾಂಡ್ ಹೆಲ್ ಹಾರರ್ ಪಾರ್ಕ್‌ ನರಕ ದರ್ಶನ....!!!

ಥೈಲ್ಯಾಂಡ್ ಹೆಲ್ ಹಾರರ್ ಪಾರ್ಕ್‌ ನರಕ ದರ್ಶನ....!!!

ಗುರುಮೂರ್ತಿ

ಬೆಂಗಳೂರು , ಶನಿವಾರ, 3 ಫೆಬ್ರವರಿ 2018 (14:08 IST)
ಹಿಂದು ಪುರಾಣಗಳಲ್ಲಿ ನಾವು ಸತ್ತ ಮೇಲೆ ಏನಾಗುತ್ತೇವೆ ಎಂಬುದನ್ನು ಗರುಡ ಪುರಾಣದಲ್ಲಿ ಹಿಂದೆಯೇ ಬರೆದಿಡಲಾಗಿದೆ. ಅಂತೆಯೇ ಅದರಲ್ಲಿ ಯಾವ ಪಾಪ ಕರ್ಮಕ್ಕೆ ಯಾವ ಪ್ರಕಾರದ ಶಿಕ್ಷೆ ಎಂಬುದನ್ನು ಕೊಡಲಾಗಿದೆ. ಅಲ್ಲದೇ ಸ್ವರ್ಗ ಮತ್ತು ನರಕದ ಕಲ್ಪನೆಯ ಬಗ್ಗೆಯೂ ಸಹ ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಕೆಲವರು ಓದಿ ತಿಳಿದುಕೊಂಡರೆ ಇನ್ನು ಕೆಲವರ ಮನೆಯಲ್ಲಿ ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಹಿರಿಯರು ನರಕದ ಭಯವನ್ನು ಹುಟ್ಟಿಸುತ್ತಾರೆ. ಹಾಗಾದ್ರೆ ನಿಜಕ್ಕೂ ನರಕ ಇದೆಯೇ ಅದು ಹೇಗೆಲ್ಲಾ ಇರಬಹುದು ಎಂಬ ಕೂತುಹಲ ಎಲ್ಲರಿಗೂ ಇರುವುದು ಸಾಮಾನ್ಯವಾದ ಸಂಗತಿ.
ಈ ಸ್ವರ್ಗ ನರಕಗಳ ಪರಿಕಲ್ಪನೆ ಕೇವಲ ಹಿಂದುಗಳಷ್ಟೇ ನಂಬುವುದಿಲ್ಲ. ಎಲ್ಲಾ ಧರ್ಮಗಳಲ್ಲೂ ಇದರ ಕುರಿತಾದ ಉಲ್ಲೇಖವಿದೆ, ಆದರೆ ಅದನ್ನು ಹೇಳುವ ರೀತಿ ಮತ್ತು ಅರ್ಥೈಸುವ ರೀತಿ ಮಾತ್ರ ಬೇರೆ ಎಂದೇ ಹೇಳಬಹುದು. ಅದೇ ರೀತಿಯಲ್ಲಿ ಬೌದ್ಧ ಧರ್ಮ, ಈ ಧರ್ಮದಲ್ಲೂ ಸಹ ಸ್ವರ್ಗ ನರಕಗಳ ಪರಿಕಲ್ಪನೆ ಇದೆ. ಅದರ ಪ್ರಕಾರವಾಗಿ ನರಕ ಎಂದರೆ ಹೇಗಿರಬಹುದು ಎಂಬುದನ್ನು ಈ ಸ್ಥಳದಲ್ಲಿ ಕಾಲ್ಪನಿಕವಾಗಿ ನಿರ್ಮಿಸಿದ್ದಾರೆ. ಅದು ಎಲ್ಲಿದೆ ಎನ್ನೋ ಕುತೂಹಲ ನಿಮಗಿದ್ರೆ ಮುಂದೆ ಓದಿ.
webdunia
ನಾವು ಈ ಸ್ಥಳಕ್ಕೆ ಹೋಗುವ ಮುನ್ನ ಗರುಡ ಪುರಾಣ ಎಂದರೇನು ಎಂದು ತಿಳಿಯುವುದು ಮುಖ್ಯವಾಗಿದೆ, ಏಕೆಂದರೆ ಈ ಪಾರ್ಕ್‌ನಲ್ಲಿರುವ ಎಲ್ಲಾ ಪ್ರತಿಮೆಗಳು ಗರುಡ ಪುರಾಣದಲ್ಲಿರುವ ಅಂಶವನ್ನು ಹೋಲುವುದರಿಂದ ನಿಮಗೆ ಅದು ಸಹಾಯಕವಾಗಬಹುದು. ಹಿಂದು ಪುರಾಣದ ಪ್ರಕಾರ ಗರುಡ ಪುರಾಣವು ಒಂದು ಪವಿತ್ರ ಗ್ರಂಥವಾಗಿದ್ದು, 19,000 ಸಾವಿರದಷ್ಟು ಶ್ಲೋಕಗಳಿವೆ. ಇದರಲ್ಲಿ ಭಗವಾನ್ ವಿಷ್ಣುವು ಮಾನವರು ಸತ್ತ ನಂತರ ಅವರವರ ಪಾಪ ಕರ್ಮಕ್ಕೆ ಯಾವ ರೀತಿಯ ಶಿಕ್ಷೆಗಳನ್ನು ವಿಧಿಸಲಾಗುತ್ತದೆ ಎಂಬುದನ್ನು ತನ್ನ ವಾಹನವಾದ ಗರುಡನಿಗೆ ಉಪದೇಶಿಸುತ್ತಾನೆ.  ಅದಕ್ಕಾಗಿಯೇ ಇದಕ್ಕೆ ಗರುಡ ಪುರಾಣ ಎಂಬ ಹೆಸರು ಬಂತು ಎಂಬುದು ಗ್ರಂಥಗಳಿಂದ ತಿಳಿದುಬರುವ ಅಂಶವಾಗಿದೆ.
webdunia
ನರಕವನ್ನು ಸಾಯುವ ಮೊದಲು ಒಮ್ಮೆ ಕಣ್ತುಂಬಿಕೊಳ್ಳಬೇಕು ಎಂದರೆ ನೀವು ಥೈಲ್ಯಾಂಡ್ ದೇಶದ ಪ್ರಸಿದ್ಧ ಸ್ಥಳವಾದ ಚೊನ್‌ಬುರಿಗೆ ಬರಬೇಕು. ಥೈಲ್ಯಾಂಡ್ ದೇಶದಲ್ಲಿ ಹೆಚ್ಚಾಗಿ ಬೌದ್ಧಿಗಳೇ ಇರುವುದರಿಂದ ಇಲ್ಲಿ ಬೌದ್ಧ ಧರ್ಮ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ಅದ್ಭುತವಾದ ದೇವಸ್ಥಾನಗಳಿದ್ದು, ವಿಭಿನ್ನ ರೀತಿಯ ಬೌದ್ಧ ಪ್ರತಿಮೆಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಅಲ್ಲದೇ ಇದೇ ಸ್ಥಳದಲ್ಲಿ ನರಕವನ್ನು ನೀವು ಕಾಣಬಹುದು, ಚೊನ್ ಬುರಿಯಿಂದ ಸುಮಾರು 14.5 ಕಿಮೀ. ಪ್ರಯಾಣಿಸಿದರೆ ನಿಮಗೆ ವಾಂಗ್ ಸೈನ್ ಸುಕ್ (ಥೈಲ್ಯಾಂಡ್‌ನ ನರಕ ಭಯಾನಕ ಪಾರ್ಕ್) ಸಿಗುತ್ತದೆ. ಅದೊಂದು ದೂಡ್ಡದಾದ ಪಾರ್ಕ್ ಆಗಿದ್ದು, ಅಲ್ಲಿ ಗರುಡ ಪುರಾಣದಲ್ಲಿ ಕಂಡುಬರುವಂತಹ ನರಕದ ಭಯಾನಕತೆಯನ್ನು ನೀವು ಅಲ್ಲಿ ಕಾಣಬಹುದಾಗಿದೆ. ಇಲ್ಲಿರುವ ಚಿತ್ರ ವಿಚಿತ್ರವಾದ ಪ್ರತಿಮೆಗಳು ನಿಮ್ಮನ್ನು ಭಯಪಡಿಸುದೇ ಇರಲಾರವು.
webdunia
ಮೂಲಗಳ ಪ್ರಕಾರ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬಿತ್ತಲು ಮತ್ತು ನೀತಿವಂತರಾಗಿ ಪ್ರಜ್ಞಾವಂತರಾಗಿ ಇರುವಂತೆ ಮಾಡಲು ಈ ಪಾರ್ಕ್‌ ಅನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಇಲ್ಲಿರುವ ಪ್ರತಿ ಪ್ರತಿಮೆಗಳ ಅಡಿಯಲ್ಲಿ ಅವರು ಮಾಡಿರುವ ತಪ್ಪುಗಳು ಮತ್ತು ಅದಕ್ಕೆ ನೀಡುವ ಶಿಕ್ಷೆಗಳ ಪ್ರಕಾರವನ್ನು ನಾವು ಕಾಣಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿ ಸ್ವರ್ಗದಲ್ಲಿರುವಂತಹ ಪ್ರತಿಮೆಗಳು ಮತ್ತು ನರಕದ ಅಧಿಪತಿಯಾಗಿರುವ ಯಮ, ಚಿತ್ರಗುಪ್ತರು ಕುಳಿತಿರುವ ಪ್ರತಿಮೆಗಳು, ಶಿಕ್ಷೆಯ ನೋವಿನಿಂದ ಚೀರುತ್ತಿರುವ ಪ್ರತಿಮೆಗಳೆಲ್ಲವನ್ನು ನಾವು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಯಮ ಕಿಂಕರರ ಪ್ರತಿಮೆಗಳು ಎಂದರೆ ತಪ್ಪಾಗುವುದಿಲ್ಲ.
webdunia
ಅಷ್ಟೇ ಅಲ್ಲ ಈ ಪಾರ್ಕಿನ ಸುತ್ತಲೂ ಕೆಲವು ಬೌದ್ಧ ಸನ್ಯಾಸಿಗಳ ಪ್ರತಿಮೆಯನ್ನು ನಾವು ನೋಡಬಹುದು. ಅಲ್ಲದೇ ಯಮಕಿಂಕರರು ಈಟಿಯಿಂದ ಮನುಷ್ಯರ ಎದೆಯನ್ನು ಇರಿಯುವ ಪ್ರತಿಮೆಗಳು ಹಾಗೂ ಮನುಷ್ಯರ ದೇಹವನ್ನು ಕತ್ತರಿಸುವ ಪ್ರತಿಮೆಗಳನ್ನು ಹೆಚ್ಚಾಗಿ ನೋಡುಗರನ್ನು ತಮ್ಮತ್ತ ಸೆಳೆಯುತ್ತವೆ. ಅಷ್ಟೇ ಅಲ್ಲ, ಇಲ್ಲಿ ಶಾಂತರೂಪದಲ್ಲಿರುವ ಕೆಲವು ಬುದ್ಧನ ಪ್ರತಿಮೆಗಳು ನಿಮಗೆ ಕಂಡುಬರುತ್ತದೆ. ಅಲ್ಲದೇ ಇಲ್ಲಿರುವ ಕೆಲವು ಬೃಹದಾಕಾರವಾಗಿರುವ ಲಾಪಿಂಗ್ ಬುದ್ಧನ ಪ್ರತಿಮೆಗಳು ಜನಾಕರ್ಷಣೆಯ ಕೇಂದ್ರ ಬಿಂದು ಎಂದೇ ಹೇಳಬಹುದಾಗಿದೆ. 
 
ಇದಲ್ಲದೇ ಅಲ್ಲಿರುವ ಎಲ್ಲಾ ಪ್ರತಿಮೆಗಳು ನೋಡಲು ಆಕರ್ಷಣಿಯವಾಗಿದ್ದು ಅದರ ರಚನೆಯು ತುಂಬಾ ಅಚ್ಚುಕಟ್ಟಾಗಿದೆ. ಇದರ ಪಕ್ಕದಲ್ಲೇ ಚೊನ್‌ಬುರಿಯ ಪ್ರಸಿದ್ಧ ದೇವಸ್ಥಾನವಿದ್ದು, ಪ್ರವಾಸಿಗರು ದೇವಾಲಯದ ದರ್ಶನವನ್ನು ಮಾಡಬಹುದಾಗಿದೆ. ಒಟ್ಟಿನಲ್ಲಿ ಬದುಕಿರುವಾಗಲೇ ನರಕ ದರ್ಶನ ಮಾಡಬೇಕು ಎಂದುಕೊಳ್ಳೋರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿದ್ದು, ಒಮ್ಮೆ ಇಲ್ಲಿ ಭೇಟಿ ನೀಡುವ ಮೂಲಕ ನಿಮ್ಮ ಪ್ರವಾಸವನ್ನು ನೀವು ಅವೀಸ್ಮರಣೀಯ ಗೊಳಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ: ಬಿಜೆಪಿ ಮುಖಂಡ