Publish Date: Wed, 21 Aug 2024 (14:48 IST)
Updated Date: Wed, 21 Aug 2024 (14:51 IST)
ಕೊಪ್ಪಳ: ನಿಯಮ ಉಲ್ಲಂಘಿಸಿ ಗಣಿ ಕಂಪನಿಗೆ ಮಂಜೂರಾತಿ ನೀಡಿದ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಸಂದರ್ಭ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಆಲಮಟ್ಟಿಗೆ ಬಾಗಿನ ಅರ್ಪಿಸಲು ತೆರಳುವ ಮೊದಲು ಬುಧವಾರ ಇಲ್ಲಿಗೆ ಸಮೀಪದ ಗಿಣಿಗೇರಿಯಲ್ಲಿರುವ ಎರ್ ಸ್ಕ್ರಿಪ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಚ್‌ಡಿಕೆ ಅವರನ್ನು ಬಂಧಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಅವರನ್ನು ಬಂಧಿಸುವ ಸಂದರ್ಭ ಬಂದರೆ ಬಂಧಿಸುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಈಗ ಅಂಥ ಸನ್ನಿವೇಶ ಇಲ್ಲ ಎಂದು ಸ್ಪಷ್ಟಣೆ ನೀಡಿದರು.
ಇದೀಗ ಕುಮಾರಸ್ವಾಮಿಗೆ ಭಯ ಶುರುವಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಾರೆ ಎನ್ನುವ ಆತಂಕ ಅವರಲ್ಲಿದೆ. ತನಿಖೆ ಮಾಡಿ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವಂತೆ ಲೋಕಾಯುಕ್ತರು ಕೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಅನೇಕರು ಇದ್ದರು.