ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ಮನೆಗಳು ನೀರುಪಾಲಾಗಿವೆ. ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಬೇಳೆ ಕಾಳುಗಳು ನೀರು ಪಾಲಾದರೇ, ಮನೆಯಲ್ಲಿನ ಬಟ್ಟೆಬರೆಗಳನ್ನ ಕಳೆದುಕೊಂಡ ನಾಗರಿಕರು ತಮ್ಮ ಜೀವವನ್ನ ರಕ್ಷಿಸಿಕೊಳ್ಳಲು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಈಗ ಬದುಕು ಕಟ್ಟಿಕೊಳ್ಳುವುದೇ ಸವಾಲು
ದರಶಾಹಿಯಾಗುತ್ತಿರುವ ಮನೆಗಳು. ಜೀವರಕ್ಷಣೆಗಾಗಿ ದೋಣಿ ಮೂಲಕ ಬರುತ್ತಿರುವ ಜನರು. ಜೀವ ರಕ್ಷಿಸಿಕೊಳ್ಳಲು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥರು. ಹೌದು ಒಂದಾ, ಎರಡ ಹತ್ತಾರು ದೃಶ್ಯಗಳು ಪ್ರವಾಹ ಸೃಷ್ಟಿಸಿದ ಅವಾಂತರ ಹೇಳುತ್ತಿವೆ.
ರಾಜ್ಯದ ಕರಾವಳಿ ಜಿಲ್ಲೆಯಾದ ಉತ್ತರಕನ್ನಡದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ತಾಲೂಕುಗಳಾದ ಕಾರವಾರ ಮತ್ತು ಅಂಕೋಲಾ ಅಕ್ಷರಶಃ ಮುಳುಗಿಹೋಗಿವೆ. ಗಂಗಾವಳಿ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಹತ್ತಾರು ಗ್ರಾಮಗಳು ಮುಳುಗಿಹೋಗಿವೆ. ಕಾರವಾರದ ಬಳಿ ಕಾಳಿ ನದಿ ನೀರು ಕೂಡ ಹೆಚ್ಚಾಗಿದ್ದರಿಂದ ಹಲವು ಗ್ರಾಮಗಳ ಜನರು ತತ್ತರಿಸಿ ಹೋಗಿದ್ದಾರೆ. ನದಿ ನೀರಿನ ಪ್ರವಾಹದಿಂದ ಜನರು ಮನೆ , ಆಸ್ತಿಪಾಸ್ತಿ ಕಳೆದುಕೊಂಡಿದ್ದು, ಜೀವರಕ್ಷಣೆಗಾಗಿ ಕಾಳಜಿ ಕೇಂದ್ರ ಸೇರಿಕೊಂಡಿದ್ದಾರೆ. ಅಂಕೋಲಾದಲ್ಲಿ 32, ಕಾರವಾರದಲ್ಲಿ 27, ಕುಮಟಾದಲ್ಲಿ 9, ಸಿದ್ದಾಪುರ 5 ದಾಂಡೇಲಿಯಲ್ಲಿ 3 ಸೇರಿದಂತೆ ಒಟ್ಟು 82 ಗ್ರಾಮಗಳು ಮುಳುಗಡೆಯಾಗಿವೆ. ಒಟ್ಟು 12,518 ಜನರು ಸಂತ್ರಸ್ಥರಾಗಿದ್ದಾರೆ. ಅಂಕೋಲಾದಲ್ಲಿ 38, ಕಾರವಾರದಲ್ಲಿ 25 ಮತ್ತು ಕುಮಟಾದಲ್ಲಿ 18 ಸೇರಿ ಒಟ್ಟು 93 ಕಾಳಜಿ ಕೇಂದ್ರ ತೆರೆಯಲಾಗಿದೆ. ಒಟ್ಟು ಸಾವಿರಕ್ಕೂ ಹೆಚ್ಚು ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಬದುಕು ಕಳೆದುಕೊಂಡ ನದಿ ಪಾತ್ರದ ಜನ
ಅಂಕೋಲಾದ ಸರಳೆಬೈಲ್, ಹೊನ್ನಳ್ಳಿ, ಹಿಚ್ಕಡ, ವಾಸರಕುದ್ರಗಿ, ಶಿರೂರು ಸೇರಿದಂತೆ ಇತರೆಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಾರವಾರದ ಕದ್ರಾ, ಉಮಳಿಜೂಗ್, ಬೋಡ್ ಜೂಗ್, ಖಾರ್ಗಾಜೂಗ್, ಕದ್ರಾ ಸೇರಿದಂತೆ ಇತರೆಡೆ ನೀರು ತುಂಬಿದ್ದರಿಂದ ಇಂಡಿಯನ್ ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 155 ಜನರನ್ನ ರಕ್ಷಣೆ ಮಾಡಿ ಕಾಳಜಿ ಕೇಂದ್ರಕ್ಕೆ ಕರೆತಂದಿದ್ದಾರೆ.ಅದೇ ರೀತಿ ನೌಕಾನೆಲೆ ರಕ್ಷಣಾ ಪಡೆ ಸಿಬ್ಬಂದಿಗಳು ಶಿನಗುಡ್ಡ, ಭೈರೆ ಗ್ರಾಮಗಳಿಂದ ನೂರಾರು ಜನರನ್ನ ರಕ್ಷಣೆ ಮಾಡಿದ್ದಾರೆ. ಕದ್ರಾ, ಕೊಡ್ಸಳ್ಳಿ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದ್ದರಿಂದ ಎಲ್ಲಾ ಗೇಟ್ಗಳನ್ನ ತೆರೆದು ಸುಮಾರು ಎರಡು ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತದೆ. ನದಿಯ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಮನೆಗಳು ಸಂಪೂರ್ಣ ಮುಳುಗಿಹೋಗಿವೆ. ಒಂದೊಂದೆ ಮನೆಗಳು ನೀರಿನಲ್ಲಿ ಕುಸಿದು ಬೀಳುತ್ತಿವೆ. ಮನೆಯಲ್ಲಿ ಸಂಗ್ರಹಿಸಿದ್ದ ಕಾಳುಗಳು, ಧಾನ್ಯಗಳು ಪ್ರವಾಹದಿಂದ ಹಾಳಾಗಿದೆ. ಕೃಷಿ ಭೂಮಿಯಲ್ಲಿ ನೀರು ತುಂಬಿದ್ದರಿಂದ ಬೆಳೆಗಳು ಹಾಳಾಗಿವೆ.
ಜನತೆ ಮನೆಯಲ್ಲಿರುವ ವಸ್ತುಗಳನ್ನ ರಕ್ಷಿಸಿಕೊಳ್ಳಲಾಗದೆ ಅಸಹಾಯಕರಾಗಿದ್ದಾರೆ. ಮಹಿಳೆಯರು, ಮಕ್ಕಳು ವೃದ್ಧರು ತನ್ನ ಜೀವವನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲವನ್ನ ತೊರೆದುಬಂದಿದ್ದಾರೆ. ಹೀಗಾಗಿ ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಅನೇಕ ದಶಕಗಳ ಬಳಿಕ ಅಂಕೋಲಾ ಮತ್ತು ಕಾರವಾರದ ನದಿಗಳು ಉಕ್ಕಿ ಹರಿದಿದ್ದು, ಜನರ ಆತಂಕವನ್ನ ಹೆಚ್ಚಿಸಿದೆ. ಕುಮಟಾದ ಅಘನಾಶಿನಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಜನ ಸಂತ್ರಸ್ಥರಾಗಿದ್ದಾರೆ. ಘಟ್ಟದ ಮೇಲ್ಬಾಗದಲ್ಲಿ ಅತ್ಯಧಿಕ ಮಳೆಯಾಗಿದ್ದರಿಂದ ಅನಾಹುತ ಸಂಭವಿಸಿದೆ. ಯಾವಾಗ ನೆರೆ ಪ್ರವಾಹ ಕಡಿಮೆಯಾಗುತ್ತೋ ಎಂಬುದನ್ನ ಸಂತ್ರಸ್ಥರು ಎದುರು ನೋಡ್ತಿದ್ದಾರೆ.