Select Your Language

Notifications

webdunia
webdunia
webdunia
webdunia

15 ರಿಂದ 18 ವರ್ಷದೊಳಗಿನ 3.5ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ

15 ರಿಂದ 18 ವರ್ಷದೊಳಗಿನ 3.5ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ
bangalore , ಬುಧವಾರ, 5 ಜನವರಿ 2022 (20:40 IST)
ಚಿಕ್ಕಬಳ್ಳಾಪುರ:ನೆನ್ನೆ ಒಂದೇ ದಿನ ರಾಜ್ಯದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮೂರುವರೆ ಲಕ್ಷ ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲ ಡೋಸ್ ಆಗಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.
 
 
ಅವರು ಬುಧವಾರ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 15 ರಿಂದ 18 ವರ್ಷದೊಳಗಿನ ಮಕ್ಕಳ ಯುವ ಕೋವಿಡ್ ಲಸಿಕಾ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
 
 
ಪ್ರತ್ಯೇಕ ಮಾರ್ಗಸೂಚಿ
ಕಳೆದ ಎರಡು ಅಲೆಗಳನ್ನು ಸರ್ಕಾರ ಸಾರ್ವಜನಿಕರ ಸಹಕಾರದೊಂದಿಗೆ ಸಮರ್ಥವಾಗಿ ಎದುರಿಸಿದೆ. ಮೂರನೇ ಅಲೆಯಲ್ಲಿ ಬಂದಿದೆ ಎನ್ನಲಾದ ಕೋವಿಡ್ ನ ರೂಪಾಂತರಿ ಪ್ರಬೇಧ ಒಮೈಕ್ರಾನ್ ವೇಗವಾಗಿ ಹರಡುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆನ್ನೆ ಒಂದೇ ದಿನ ಮೂರು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಮಹಾನಗರದಲ್ಲಿ ಜನಸಾಂದ್ರತೆ ಅಧಿಕವಾಗಿರುವುದರಿಂದ ಮತ್ತು ವಿದೇಶಗಳಿಂದ ಮತ್ತು ಹೊರರಾಜ್ಯಗಳಿಂದ ಜನರು   ನೇರವಾಗಿ ಬೆಂಗಳೂರಿಗೆ ಬರುವುದರಿಂದ   ಈ ಸೋಂಕು ರಾಜಧಾನಿಯಲ್ಲಿ ವೇಗವಾಗಿ ಹರಡಲು ಕಾರಣಗಳಾಗಿವೆ. ಆದ್ದರಿಂದಲೇ ಬೆಂಗಳೂರು ನಗರದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿ ಬೆಂಗಳೂರಿಗೇ ಪ್ರತ್ಯೇಕ ಕೋವಿಡ್ ನಿಯಂತ್ರಣ  ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.ಅಲ್ಲಿ 1 ರಿಂದ 9 ನೇ ತರಗತಿವರೆಗಿನ  ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.
 
 
5-6 ವಾರಗಳಲ್ಲಿ 3ನೇ ಅಲೆ ಕೊನೆ
ಈ ಮೂರನೇ ಅಲೆ ಕೊನೆಯ ಅಲೆಯೂ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯ ಮಟ್ಟದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಅನೇಕ ತಜ್ಞರೂ ಇದೇ ಅಭಿಪ್ರಾಯವನ್ನು ನೀಡಿದ್ದು, ಇನ್ನು ಒಂದೂವರೆ ತಿಂಗಳಲ್ಲಿ ಮೂರನೇ ಅಲೆ ಕೊನೆಗೊಳ್ಳುವ ಸಾಧ್ಯತೆಗಳಿವೆ. ಇದನ್ನು ತಾಂತ್ರಿಕ ಸಲಹಾ ಸಮಿತಿ ಪುಷ್ಟೀಕರಿಸಿದ್ದು, ತಜ್ಞರೂ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮೈಮರೆಯುವ ಪ್ರಶ್ನೆಯೇ ಇಲ್ಲ. ಮಾಸ್ಕ್ ಧರಿಸುವುದು ಕಡ್ಡಾಯ. ವ್ಯಕ್ತಿಗತ ಅಂತರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ಜೊತೆಗೆ ಸೋಂಕು ನಿವಾರಕ ದ್ರವ ಬಳಕೆಯನ್ನು ಮುಂದುವರೆಸಬೇಕು. ಇದರಲ್ಲಿ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.
 
 
ಜಿಲ್ಲಾಡಳಿತಕ್ಕೆ ಅಭಿನಂದನೆಗಳ ಸುರಿಮಳೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿನ್ನೆಯವರೆಗೆ 15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕಾಕರಣದಲ್ಲಿ  ಒಟ್ಟು ಶೇ.33 ರಷ್ಟು ಗುರಿಸಾಧನೆಯಾಗಿದ್ದು, ಮೊದಲ ದಿನ 7,851 ಮಕ್ಕಳಿಗೆ  ಹಾಗೂ ಎರಡನೇ ದಿನವಾದ ನಿನ್ನೆ 13, 904 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 21,755 ಡೋಸ್ ಲಸಿಕೆಯನ್ನು ಮಕ್ಕಳಿಗೆ ನೀಡಿ ಉತ್ತಮ ಸಾಧನೆ ಮಾಡಿರುವ ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ತಿಳಿಸಿದರು,ಅಲ್ಲದೆ ಜಿಲ್ಲೆಯ ವಿಧ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಅತಿ ಉತ್ಸಾಹದಿಂದ ಲಸಿಕೆ ಪಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. 
 
 
ಜಿಲ್ಲೆಯಲ್ಲಿ ಒಟ್ಟು 65,648 ಮಕ್ಕಳಿಗೆ  ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಎರಡು ಮೂರು ದಿನಗಳಲ್ಲಿ ಶೇ.100 ಗುರಿಸಾಧಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಮಕ್ಕಳಿಗೆ ನೀಡುತ್ತಿರುವ ಲಸಿಕೆ ಕೋವ್ಯಾಕ್ಸಿನ್ ಆಗಿದೆ. ಮೊದಲ ಡೋಸ್ ಪಡೆ  ದವರಿಗೆ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುವುದು. ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಉತ್ತಮ ಆರೋಗ್ಯಕ್ಕೆ ಒತ್ತು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಲಸಿಕೆ ಪರಿಣಾಮಕಾರಿಯಾಗಲಿದೆ ಮತ್ತು ಮುಖ್ಯವಾಗಲಿದೆ. ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ಮತ್ತು ಆರೋಗ್ಯದ ವಿಚಾರದಲ್ಲಿ  ಶಿಕ್ಷಕರ ಹೊಣೆಗಾರಿಕೆ ಅತ್ಯಂತ ಮಹತ್ವಾದ್ದಾಗಿದೆ ಎಂದು ತಿಳಿಸಿದರು.
 
 ಮೊದಲ  ಜಿಲ್ಲೆಯಾಗಿ  ಹೊರಹೊಮ್ಮಲಿ 
 
 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ.100 ರಷ್ಟು ಸಾಧನೆ 
ಮಾಡಗಿದ್ದು,  ಎರಡನೇ ಡೋಸ್ ಶೇ.82 ರಷ್ಟು ಗುರಿ ಸಾಧನೆಯಾಗಿದೆ. ಎರಡನೇ ಡೋಸ್ ಅನ್ನು ಶೇ.100 ರಷ್ಟು ಗುರಿ ಸಾಧಿಸಲು ಜಿಲ್ಲೆಯಲ್ಲಿ ಲಸಿಕಾಕರಣದ ವೇಗವನ್ನು ಜಿಲ್ಲಾಡಳಿತ ಹೆಚ್ಚಿಸಬೇಕು ಆ ಮೂಲಕ ಕೋವಿಡ್ ಲಸಿಕಾಕರಣದಲ್ಲಿ ಎರಡೂ ಡೋಸ್ ಗಳನ್ನು ಶೇ.100 ರಷ್ಟು  ಗುರಿಸಾಧನೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ  ಶೇ.100 ಲಸಿಕೆ ನೀಡಿದ ರಾಜ್ಯದ ಮೊಟ್ಟಮೊದಲ ಜಿಲ್ಲೆಯಾಗಿ ಹೊರಹೊಮ್ಮಬೇಕು ಮತ್ತು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ‌ ನೀಡಲಾಗಿದೆ ಎಂದು ತಿಳಿಸಿದರು.
 
 
ಲಸಿಕಾ ಮೇಳ ಕಾರ್ಯಕ್ರಮದ ನಂತರ ನೇರವಾಗಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪಕ್ಕೆ ತೆರಳಿದ ಸಚಿವರು ಜಿಲ್ಲಾಡಳಿತ ಆಯೊಜಿಸಿದ್ದ ಪರಿಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೋವಿಡ್ ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ 58 ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ  ಪರಿಹಾರ ಧನ ಮಂಜೂರಾತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.
 
ತ್ವರಿತ ಜಮೆ 
ಅತಿವೃಷ್ಟಿ ಮಳೆ ಹಾನಿಗೆ  ಬೆಳೆಗಳು ಮಳೆಗಾಲದಲ್ಲಿ  ನಾಶವಾದರೆ ಪರಿಹಾರ ಸಿಗುತ್ತಿದ್ದದ್ದು ಮುಂದಿನ ಬೇಸಿಗೆಯಲ್ಲಿ, .ಚಳಿಗಾಲದಲ್ಲಿ ಬೆಳೆ ಹಾನಿಯಾದಾಗ ಮುಂದಿನ ಆರು ತಿಂಗಳಿನಲ್ಲಿ ಪರಿಹಾರ ಸಿಗುತ್ತಿತ್ತು.ಆದರೆ ಮೊಟ್ಟ ಮೊದಲ ಬಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳ ವೀಕ್ಷಣೆ ಮಾಡಿ, ಜಂಟಿ ಸಮೀಕ್ಷೆ ನಡೆಸಿ ಕೇವಲ 48 ಗಂಟೆಯ ಒಳಗೆ  ಅಗತ್ಯ ಕ್ರಮ ತೆಗೆದುಕೊಂಡು ಪರಿಹಾರ್ ಪೋರ್ಟಲ್ ನಲ್ಲಿ  ನಿಗದಿತ ಅವಧಿಯಲ್ಲಿ ನಮೂದು ಮಾಡುವ ಮೂಲಕ ತ್ವರಿತವಾಗಿ ಪರಿಹಾರ ಸಂತ್ರಸ್ತರಿಗೆ ಸಿಗುವಂತೆ ಮಾಡಿದ್ದಾರೆ. ಅಲ್ಲದೆ ಹಿಂದಿಗಿಂತ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿದ್ದೇವೆ.ಯಾವುದೇ ಮದ್ಯವರ್ತಿಗಳ ಹಾವಳಿಗಳು ಇಲ್ಲದೆ ಡಿಬಿಟಿ ಮುಖಾಂತರ ಸಂತ್ರಸ್ತರ  ಬ್ಯಾಂಕ್ ಖಾತೆಗಳಿಗೆ ಸರ್ಕಾರ ನೇರವಾಗಿ  ಪರಿಹಾರ ಹಣವನ್ನು ಜಮೆ ಮಾಡುತ್ತಿದೆ ಎಂದರು.
 
 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್  ಮುಖ್ಯ  ಕಾರ್ಯನಿರ್ವಹಣಾಧಿಕಾರಿ  ಪಿ. ಶಿವಶಂಕರ್,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ನಗರಸಭೆ  ಅಧ್ಯಕ್ಷ  ಆನಂದ್  ರೆಡ್ಡಿ  ಬಾಬು, ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಆರ್ ಕಬಾಡೆ,ತಹಸಿಲ್ದಾರ್ ಗಣಪತಿಶಾಸ್ತ್ರಿ  ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೂಕಂಪನ ಪೀಡಿತ ಪ್ರದೇಶಗಳಿಗೆ ಸಚಿವ ಡಾ. ಕೆ ಸುಧಾಕರ್ ಭೇಟಿ