ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರಿಗೆ ಶುಕ್ರವಾರ ಪ್ರತಿಷ್ಠಿತ ಮೆರ್ಲೆಬೋನ್ ಕ್ರಿಕೆಟ್ ಕ್ಲಬ್ ಆಜೀವ ಸದಸ್ಯತ್ವ ಗೌರವ ಲಭಿಸಿದೆ. ಈ ಗೌರವ ಪಡೆದ 24ನೇಯ ಭಾರತೀಯ ಕ್ರಿಕೆಟಿಗರೆನಿಸಿದ್ದಾರೆ ಜಾಹೀರ್.
ಆಟಗಾರರು ವೈಯಕ್ತಿಕವಾಗಿ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಎಂಸಿಸಿ ಆಡಳಿತ ಮಂಡಳಿ ಈ ಗೌರವವನ್ನು ನೀಡುತ್ತದೆ. ಎಂಸಿಸಿಯ ಒಟ್ಟು ಸದಸ್ಯರ ಸಂಖ್ಯೆ 18,000. ಇದರಲ್ಲಿ ಆಜೀವ ಸದಸ್ಯತ್ವ ಪಡೆದಿರುವವರು 300 ಮಂದಿ.
ಕ್ರಿಕೆಟ್ ಲೋಕಕ್ಕೆ ಖಾನ್ ಕೊಡುಗೆ ಮಹತ್ತರವಾದದ್ದು. ಭಾರತದ ಅವಿಸ್ಮರಣೀಯ ವಿಜಯಗಳಲ್ಲಿ ಜಹೀರ್ ಪಾತ್ರ ಪ್ರಮುಖವಾದದ್ದು. ಏಕಾಂಗಿಯಾಗಿ ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟ ಹೆಗ್ಗಳಿಕೆ ಸಹ ಅವರಿಗಿದೆ. ಅವರ ಗುರುತರ ಸಾಧನೆಯನ್ನು ಪರಿಗಣಿಸಿ ಈ ಗೌರವವನ್ನು ನೀಡುತ್ತಿದ್ದೇವೆ ಎಂದು ಎಂಸಿಸಿ ಅಧ್ಯಕ್ಷ ಜಾನ್ ಸ್ಪೀಫನ್‌ಸನ್ ತಿಳಿಸಿದ್ದಾರೆ.
92 ಟೆಸ್ಟ್‌ಗಳಲ್ಲಿ 311 ವಿಕೆಟ್ ಮತ್ತು 200 ಏಕದಿನ ಪಂದ್ಯಗಳಿಂದ 282 ವಿಕೆಟ್ ಪಡೆದಿರುವ ಜಾಹೀರ್ ಅಕ್ಟೋಬರ್ 2015ರಲ್ಲಿ ಜಾಹೀರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಐಪಿಎಲ್‌ನಲ್ಲಿ ಆಟವಾಡುವುದನ್ನು ಮುಂದುವರೆಸಿರುವ ಖಾನ್, ಪ್ರಸ್ತುತ ಡೆಲ್ಲಿ ಡೆರ್ ಡೆವಿಲ್ಸ್ ನಾಯಕನಾಗಿದ್ದಾರೆ.
ನಾರಿ ಕಾಂಟ್ರೆಕ್ಟರ್ (1969), ಅಜಿತ್ ವಾಡೇಕರ್ (1978) , ಚಂದು ಬೋರ್ಡ್ (1981), ಫಾರೂಕ್ ಇಂಜಿನಿಯರ್ (1981) , ಬಾಪು ನಾಡಕರ್ಣಿ (1981), ಬಿಷನ್ ಸಿಂಗ್ ಬೇಡಿ (1982), ಬಿ.ಎಸ್. ಚಂದ್ರಶೇಖರ್ (1982), ಇ.ಎ.ಎಸ್. ಪ್ರಸನ್ನ (1984) , ಎಸ್ ವೆಂಕಟರಾಘವನ್ (1988), ಗುಂಡಪ್ಪ ವಿಶ್ವನಾಥ್ (1990), ಮೊಹಿಂದರ್ ಅಮರನಾಥ್ (1993), ಸುನಿಲ್ ಗಾವಸ್ಕರ್ (1993), ದಿಲೀಪ್ ವೆಂಗಸರ್ಕಾರ್ (1993), ಕಪಿಲ್ ದೇವ್ (1995), ಸೈಯದ್ ಕಿರ್ಮಾನಿ (1995) , ರವಿ ಶಾಸ್ತ್ರಿ (1995), ಕಿರಣ್ ಮೋರೆ (1999 ), ರಾಹುಲ್ ದ್ರಾವಿಡ್ (2008), ಅನಿಲ್ ಕುಂಬ್ಳೆ (2008), ಸಚಿನ್ ತೆಂಡೂಲ್ಕರ್ ( 2010) ಮತ್ತು ಸೌರವ್ ಗಂಗೂಲಿ (2015) ಈ ಗೌರವ ಸದಸ್ಯತ್ವ ಪಡೆದ ಇತರ ಕ್ರಿಕೆಟಿಗರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ