ಮುಂಬೈ: 2011 ರ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಬರ್ತ್ ಡೇ ದಿನವೇ ಯುವಿ ಸಾಮಾಜಿಕ ಜಾಲತಾಣದ ಮೂಲಕ ಸುದೀರ್ಘ ಪತ್ರ ಬರೆದು ದೇಶದ ಕ್ಷಮೆ ಕೋರಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?
ಇದಕ್ಕೆ ಕಾರಣ ಅವರ ತಂದೆ ಯೋಗರಾಜ್ ಸಿಂಗ್ ಮಾಡಿದ ಎಡವಟ್ಟು. ರೈತರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಯೋಗರಾಜ್ ಸಿಂಗ್ ಇತ್ತೀಚೆಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗುವಂತಹ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದೇ ವಿಚಾರವಾಗಿ ಯುವಿ ಕ್ಷಮೆ ಕೋರಿದ್ದಾರೆ. ಇತ್ತೀಚೆಗೆ ಸರ್ಕಾರ ಮತ್ತು ರೈತರ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಬೇಗನೇ ಪರಿಹಾರ ಸಿಗಲಿ. ರೈತರು ನಮ್ಮ ದೇಶದ ಬೆನ್ನೆಲುಬಾಗಿದ್ದು, ಅವರ ಸಮಸ್ಯೆಗಳು ಶಾಂತಿಯುತವಾಗಿ ಪರಿಹಾರವಾಗಲಿ ಎಂದು ಬಯಸುತ್ತೇನೆ. ಹೆಮ್ಮೆಯ ಭಾರತೀಯನಾಗಿ ಯೋಗರಾಜ್ ಸಿಂಗ್ ಅವರ ಹೇಳಿಕೆ ನನಗೆ ನೋವು ತಂದಿದೆ. ಅವರ ಹೇಳಿಕೆ ಅವರ ವೈಯಕ್ತಿಕವೇ ಹೊರತು, ನನ್ನ ಸಿದ್ಧಾಂತ ಈ ರೀತಿಯಾಗಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವೆಲ್ಲಾ ಕೊರೋನಾ ಮಹಾಮಾರಿಯ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸೋಣ, ಜೈ ಜವಾನ್, ಜೈ ಕಿಸಾನ್, ಜೈ ಹಿಂದ್ ಎಂದು ಯುವಿ ಸುದೀರ್ಘವಾಗಿ ಬರೆದು ತಂದೆ ಮಾಡಿದ ಎಡವಟ್ಟಿಗೆ ಸ್ಪಷ್ಟನೆ ನೀಡಿದ್ದಾರೆ.