ಬಿಡುವಿಲ್ಲದ ಕ್ರಿಕೆಟ್ ನಡುವೆಯೂ ಹೊಸದಾಗಿ ಅಪ್ಪಂದಿರಾಗಿರುವ ಹರಭಜನ್ ಸಿಂಗ್ ಮತ್ತು ಸುರೇಶ್ ರೈನಾ ತಮ್ಮ ಹೆಚ್ಚಿನ ಸಮಯವನ್ನು ನವಜಾತ ಪುತ್ರಿಯರ ಜತೆ ಕಳೆಯುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಐಪಿಎಲ್ ಋತುವಿನ ವೇಳೆ ರೈನಾ ಮುದ್ದು ಮಗಳಿಗೆ ತಂದೆಯಾಗಿದ್ದರೆ, ಹರಭಜನ್ ಪತ್ನಿ ಗೀತಾ ಬಸ್ರಾ ಜುಲೈ ಕೊನೆಯ ವಾರದಲ್ಲಿ ಹೆಣ್ಣುಮಗುವಿನ ತಾಯಿಯಾಗಿದ್ದಾರೆ.
ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ರೈನಾ, "ಸರಿಯಾಗಿ ಗಮನಿಸಿ ನನ್ನ ಕಣ್ಣಿನ ಕೆಳಗೆ ಕಪ್ಪು ಕಲೆಗಳನ್ನು ನೋಡುತ್ತೀರಿ. ಇತ್ತೀಚಿಗೆ ನಾನು ಸರಿಯಾಗಿ ನಿದ್ರಿಸಿಯೇ ಇಲ್ಲ. ಆದರೆ ಪ್ರಿಯಾಕಾ( ರೈನಾ ಪತ್ನಿ) ಗೆ ಹ್ಯಾಟ್ಸ್ ಆಫ್. ಆಕೆ ಎಲ್ಲವನ್ನು ತುಂಬ ಚೆನ್ನಾಗಿ ನಿರ್ವಹಿಸಿದಳು. ನಾನು ಎಷ್ಟು ಸುಸ್ತಾಗಿದ್ದರೂ ಸರಿ, ನನ್ನ ಮಗಳ ಒಂದು ಝಲಕ್ ತತ್‌ಕ್ಷಣ ನನ್ನಲ್ಲಿ ಮತ್ತಷ್ಟು ಚೈತನ್ಯವನ್ನು ತುಂಬುತ್ತದೆ. ಮೊದಲು ಕೆಲವೊಂದು ಸವಾಲುಗಳಿದ್ದವು, ನಿಧಾನವಾಗಿ ಎಲ್ಲವೂ ಸರಿ ಹೋಯಿತು. ಲಕ್ಷ್ಮಿ (ದೇವತೆ) ಬಂದಿದ್ದಾಳೆ ನಮ್ಮ ಮನೆಗೆ", ಎನ್ನುತ್ತಾರೆ ನಗುತ್ತ.
ಸಿಂಗ್ ಕೂಡ್ ತಾವು ತಂದೆಯಾಗಿರುವ ಉತ್ಸಾಹವನ್ನು ಮುಚ್ಚಿಡಲು ಪ್ರಯತ್ನಿಸುತ್ತಿಲ್ಲ. ಕೆಲ ಗಂಟೆಗಳ ಮಟ್ಟಿಗೆ ಭಾರತಕ್ಕೆ ಬಂದರೂ ಮಗಳಿಂದ ದೂರವಿರಲು ಚಡಪಡಿಸುವ ಅವರು ಸದಾ ಲಂಡನ್‌ಗೆ ಮರಳಲು ತುದಿಗಾಲಲ್ಲಿ ನಿಂತಿರುತ್ತಾರೆ.