ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಶಫಾಲಿ ವರ್ಮ ಪಕ್ಕಾ ವೀರೇಂದ್ರ ಸೆಹ್ವಾಗ್ ರಂತೇ ಬ್ಯಾಟ್ ಬೀಸುತ್ತಾರೆ. ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ 17 ವರ್ಷದ ಹುಡುಗಿ ಎರಡೂ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿ ದಾಖಲೆ ಮಾಡಿದ್ದಲ್ಲದೆ, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಈ ಪೋರಿ ಕ್ರಿಕೆಟ್ ಆಟಗಾರ್ತಿಯಾಗಿದ್ದಕ್ಕೆ ಸಚಿನ್ ತೆಂಡುಲ್ಕರ್ ಸ್ಪೂರ್ತಿಯಂತೆ. 2013 ರಲ್ಲಿ ಸಚಿನ್ ಕೊನೆಯ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಆಡಿದ್ದರು. ಅದೂ ಶಫಾಲಿ ತವರು ತಂಡ ಹರ್ಯಾಣ ವಿರುದ್ಧ. ಆಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಪ್ಪನ ತೊಡೆಯಲ್ಲಿ ಕೂತಿದ್ದ ಪುಟಾಣಿ ಶಫಾಲಿ ಸಚಿನ್ ಸಚಿನ್ ಎಂದು ಚಿಯರ್ ಮಾಡುತ್ತಿದ್ದರಂತೆ.
ಸಚಿನ್ ತೆಂಡುಲ್ಕರ್ ಆರಾಧಕಿಯಾಗಿದ್ದ ಶಫಾಲಿ ಇಂದು ಅವರಂತೇ ಆರಂಭಿಕರಾಗಿ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಸೀಮಿತ ಓವರ್ ಇರಲಿ, ಟೆಸ್ಟ್ ಇರಲಿ ತಮ್ಮ ಹೊಡೆಬಡಿಯ ಶೈಲಿಯ ಆಟದಿಂದ ಭಾರತಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಇಂಗ್ಲೆಂಡ್ ನವರೇ ಆಕೆಯ ಆಟ ನೋಡಿ ಮೆಚ್ಚಿಕೊಂಡಿದ್ದಾರೆ.