ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಯ ಮೂಡಿದ್ದಾಗ ಸರಿಪಡಿಸಲು ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಮಧ್ಯಸ್ಥಿಕೆ ವಹಿಸಿದ್ದರಂತೆ.
ಈ ವಿಚಾರವನ್ನು ಬಿಸಿಸಿಐನ ಸಿಇಒ ಆಗಿದ್ದ ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಇವರಿಬ್ಬರ ನಡುವಿನ ಅಸಮಾಧಾನ ತಾರಕಕ್ಕೇರಿತ್ತು. ಆ ಸಂದರ್ಭದಲ್ಲಿ ನನಗೆ ಕೊಹ್ಲಿಯನ್ನು ಅಷ್ಟೊಂದು ಪರಿಚಯವಿರಲಿಲ್ಲ. ಹೀಗಾಗಿ ಸಚಿನ್ ಮತ್ತು ಗಂಗೂಲಿಗೆ ಕೊಹ್ಲಿ ಜತೆ ಮಾತನಾಡುವಂತೆ ಹೇಳಿದ್ದೆ.
ಯಾಕೆಂದರೆ ಅನಿಲ್ ಕುಂಬ್ಳೆ ಬಗ್ಗೆ ನನಗೆ ಅಪಾರ ಗೌರವವಿತ್ತು. ಒಂದು ವೇಳೆ ಅವರ ಒಪ್ಪಂದ ಮುಂದುವರಿಸಲು ಅವಕಾಶವಿದ್ದರೆ ಅದನ್ನೇ ಮಾಡುತ್ತಿದ್ದೆ. ಆದರೆ ಸಚಿನ್ ಮತ್ತು ಗಂಗೂಲಿ ಕೂಡಾ ಇಂಗ್ಲೆಂಡ್ ನಲ್ಲಿದ್ದಾಗ ಕೊಹ್ಲಿ ಜತೆ ಸುದೀರ್ಘ ಮಾತುಕತೆ ನಡೆಸಿದ್ದರು. ಆದರೆ ಕೊಹ್ಲಿ ಯಾವುದೇ ಕಾರಣಕ್ಕೂ ಕುಂಬ್ಳೆಯನ್ನು ಒಪ್ಪಲು ಸಿದ್ಧರಿರಲಿಲ್ಲ. ಕೋಚ್ ಮತ್ತು ನಾಯಕನ ನಡುವೆ ವೈಮನಸ್ಯ ಬಂದಾಗ ಯಾವತ್ತೂ ತಲೆದಂಡವಾಗುವುದು ಕೋಚ್ ನದ್ದೇ. ಇಲ್ಲೂ ಅದೇ ಆಗುವುದಿತ್ತು. ಆದರೆ ಅದಕ್ಕಿಂತ ಮೊದಲು ಕುಂಬ್ಳೆಯೇ ಗೌರವಯುತವಾಗಿ ಹೊರನಡೆದರು. ಅವರ ಮೇಲೆ ನನಗೆ ಯಾವತ್ತೂ ಗೌರವವಿದೆ ಎಂದು ವಿನೋದ್ ರಾಯ್ ಹೇಳಿದ್ದಾರೆ.