Publish Date: Wed, 03 Jul 2019 (10:03 IST)
Updated Date: Wed, 03 Jul 2019 (10:07 IST)
ಲಂಡನ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವರ್ತನೆ ಎಲ್ಲರ ಹೃದಯ ಗೆದ್ದಿದೆ.
ಮೈದಾನದಲ್ಲಿ ಭಾರತೀಯ ಆಟಗಾರರನ್ನು ಹುರಿದುಂಬಿಸಲು ಬಂದ 87 ವರ್ಷದ ಅಜ್ಜಿಯನ್ನು ಪಂದ್ಯ ಮುಗಿದ ಬಳಿಕ ಭೇಟಿಯಾದ ಈ ಇಬ್ಬರು ಕ್ರಿಕೆಟಿಗರು ಆಶೀರ್ವಾದ ಪಡೆದಿದ್ದರು. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಇನ್ನೊಂದು ಕಾರಣದಿಂದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಈ ಇನಿಂಗ್ಸ್ ನಲ್ಲಿ ಭರ್ಜರಿ 5 ಸಿಕ್ಸರ್ ಸಿಡಿಸಿದ್ದರು. ಈ ವೇಳೆ ತಾವು ಸಿಕ್ಸರ್ ಹೊಡೆದ ಬಾಲ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಿದ್ದು ಅಭಿಮಾನಿ ಯುವತಿಯೊಬ್ಬಳಿಗೆ ತಾಕಿತ್ತು. ಹೀಗಾಗಿ ಪಂದ್ಯದ ಬಳಿಕ ಆ ಅಭಿಮಾನಿಯನ್ನು ಖುದ್ದಾಗಿ ಭೇಟಿಯಾದ ರೋಹಿತ್ ಕುಶಲ ವಿಚಾರಿಸಿದ್ದಲ್ಲದೆ, ತಾವು ಸಹಿ ಹಾಕಿದ ಹ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ರೋಹಿತ್ ಮಾನವೀಯತೆಗೆ ತುಂಬಾ ಮೆಚ್ಚುಗೆ ವ್ಯಕ್ತವಾಗಿದೆ.