ಲಂಡನ್: ಇಂಗ್ಲೆಂಡ್ ವಿರುದ್ಧ ಸೋತು ಪಾಕಿಸ್ತಾನವನ್ನು ವಿಶ್ವಕಪ್ ಸೆಮಿಫೈನಲ್ ನಿಂದ ಹೊರ ಹಾಕಿದ್ದ ಟೀಂ ಇಂಡಿಯಾ ನಿನ್ನೆ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 28 ರನ್ ಗಳಿಂದ ಸೋಲಿಸಿ ಸೆಮಿಫೈನಲ್ ರೇಸ್ ನಿಂದ ಹೊರಗಟ್ಟಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾರ ದಾಖಲೆಯ ಶತಕ ಮತ್ತು ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 314 ರನ್ ಗಳಿಸಿತ್ತು. ರೋಹಿತ್ ಈ ವಿಶ್ವಕಪ್ ಕೂಟದ ನಾಲ್ಕನೇ ಶತಕ ಸಿಡಿಸಿ 104 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ರಾಹುಲ್ 77 ರನ್ ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ರಿಷಬ್ ಪಂತ್ ಸ್ಪೋಟಕ 48 ರನ್ ಸಿಡಿಸಿದರು. ಬಾಂಗ್ಲಾ ಪರ ಮುಸ್ತಫಿಜೂರ್ ರೆಹಮಾನ್ 5 ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾ 48 ಓವರ್ ಗಳಲ್ಲಿ 286 ರನ್ ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 66, ಮೊಹಮ್ಮದ್ ಸೈಫುದ್ದೀನ್ ಅಜೇಯ 55 ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಹಾರ್ದಿಕ್ ಪಾಂಡ್ಯ 3 ಮತ್ತು ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು. ಇದರೊಂದಿಗೆ ಬಾಂಗ್ಲಾ ಸೆಮಿಫೈನಲ್ ಆಸೆ ಭಗ್ನವಾಗಿದ್ದರೆ, ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ 3 ನೇ ಸ್ಥಾನಕ್ಕೇರಿದ ಭಾರತ ಸೆಮಿಫೈನಲ್ ಗೆ ಪ್ರವೇಶ ಪಡೆಯಿತು.