ಧರ್ಮಶಾಲಾ: ಮೂರನೇ ದಿನದವರೆಗೂ ಟೆಸ್ಟ್ ಪಂದ್ಯ ಶಾಂತವಾಗಿಯೇ ನಡೆಯುತ್ತಿತ್ತು. ಯಾವಾಗ ಆಸೀಸ್ ಗೆ ಸೋಲಿನ ಭೀತಿ ಕಾಣಿಸಿಕೊಂಡಿತೋ ಸ್ಲೆಡ್ಜಿಂಗ್ ಮಾಡಲು ಪ್ರಾರಂಭಿಸಿದರು. ಆದರೆ ಟೀಂ ಇಂಡಿಯಾದಿಂದ ಅಂತಹದ್ದೇ ಉತ್ತರ ಬಂತು.
ರವೀಂದ್ರ ಜಡೇಜಾ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಭಾರತವನ್ನು ಸುಸ್ಥಿತಿಯತ್ತ ಕೊಂಡೊಯ್ದರು. ಈ ವೇಳೆ ಜಡೇಜಾರನ್ನು ಕೆಣಕಲು ಹೋದ ಮ್ಯಾಥ್ಯೂ ವೇಡ್ ಇಂಗು ತಿಂದ ಮಂಗನಂತಾದರು. ಇವರ ಸ್ಲೆಡ್ಜಿಂಗ್ ಪರ್ವ ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿದೆ.
ಅತ್ತ ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ನಥನ್ ಲಿಯೋನ್ ಗೆ ಇವನ ವಿಕೆಟ್ ತೆಗೆಯುವುದು ನಿಮಗೆ ಕಷ್ಟವಾಗಲಾರದು. ಬೇಗ ಕೀಳು. ಆ ಮೇಲೆ ನಾವಿಬ್ಬರು ಸೆಲ್ಫೀ ತೆಗೆಯೋಣ ಎಂದರು. ಆಗ ಸುಮ್ಮನಿದ್ದ ಜಡೇಜಾ ವೇಡ್ ಇನ್ನೊಮ್ಮೆ ಕೆಣಕಲು ಬಂದಾಗ ಬೆವರಿಳಿಸಿದರು.
ನಿನ್ನನ್ನು ಅದು ಹೇಗೆ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದರೋ? ಆ ಅರ್ಹತೆಯೇ ನಿನಗಿಲ್ಲ ಎಂದು ಬಾಯಿ ಮಾತಿನಲ್ಲಿ ಹೇಳಿದರಲ್ಲದೆ, ಅರ್ಧಶತಕ ಸಿಡಿಸಿ ಆಸ್ಟ್ರೇಲಿಯನ್ನರ ಬೆವರಿಳಿಸಿದರು. ಇವರ ವಾಗ್ಯುದ್ಧ ಬೇರ್ಪಡಿಸಲು ಅಂಪಾಯರ್ ಮಧ್ಯಪ್ರವೇಶಿಸಬೇಕಾಯಿತು. ನಂತರ ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ ವೇಡ್ ಬ್ಯಾಟಿಂಗ್ ಗೆ ಬಂದಾಗ ಜಡೇಜಾ ಮಾತಿನಲ್ಲೇ ಕೆಣಕಿದರು. ಈ ವೇಳೆ ಸಿಟ್ಟಿನಿಂದ ಕುದಿಯುತ್ತಿದ್ದ ವೇಡ್ ಸಮಾಧಾನಿಸಲು ಅಂಪಾಯರ್ ಬರಬೇಕಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ