ನ್ಯೂಜಿಲೆಂಡ್ ತಂಡವು ಭಾರತೀಯ ಸಂಜಾತ ಓಪನಿಂಗ್ ಬ್ಯಾಟ್ಸ್‌ಮನ್ ಜೀತ್ ರಾವಲ್ ಅವರನ್ನು ಮುಂಬರುವ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ನಾಲ್ಕು ಟೆಸ್ಟ್ ಪ್ರವಾಸಕ್ಕೆ ಆಯ್ಕೆ ಮಾಡಿದೆ. 16 ಆಟಗಾರರ ಬ್ಲಾಕ್ ಕ್ಯಾಪ್ ತಂಡದಲ್ಲಿ ರಾವಲ್ ಮಾತ್ರ ಟೆಸ್ಟ್ ಆಡಿರದ ಆಟಗಾರರಾಗಿದ್ದಾರೆ.
ಈ ತಂಡದಲ್ಲಿ ಭಾರತೀಯ ಸಂಜಾತ ಸ್ಪಿನ್ನರ್ ಈಶ್ ಸೋಧಿ ಕೂಡ 2 ವರ್ಷಗಳ ಅನುಪಸ್ಥಿತಿಯ ಬಳಿಕ ಸೇರ್ಪಡೆಯಾಗಿದ್ದಾರೆ. ನ್ಯೂಜಿಲೆಂಡ್‌ಗೆ ತಮ್ಮ ಕುಟುಂಬದ ಜತೆ ಆಗಮಿಸುವ ಮುಂಚೆ 27 ವರ್ಷದ ರಾವಲ್ ಭಾರತದ ಕಿರಿಯ ಆಟಗಾರರಾಗಿದ್ದರು.
ಅವರು ಮೊದಲ ದರ್ಜೆ ಕ್ರಿಕೆಟ್‌ನಲ್ಲಿ 43.48 ಸರಾಸರಿ ಸ್ಕೋರ್ ಮಾಡಿದ್ದು ಸ್ಥಳೀಯ ಸ್ಪರ್ಧೆಯಲ್ಲಿ ಆಕ್ಲೆಂಡ್ ಏಸಸ್ ಪರ ಉತ್ತಮ ಫಾರಂನಲ್ಲಿದ್ದರು. ಅವರ ಸ್ಕೋರಿನಲ್ಲಿ ಒಟಾಗೊ ವಿರುದ್ಧ 202 ರನ್ ಕೂಡ ಸೇರಿತ್ತು.
ರಾವಲ್ ಮಾರ್ಟಿನ್ ಗುಪ್ಟಿಲ್ ಮತ್ತು ಟಾಮ್ ಲಾಥಮ್ ಜತೆ ಆರಂಭಿಕ ಸ್ಪಾಟ್‌ಗೆ ಸ್ಪರ್ಧೆಯಲ್ಲಿದ್ದಾರೆ. ಗುಪ್ಟಿಲ್ ಮತ್ತು ಲಾಥಮ್ ಇಬ್ಬರೂ ಟೆಸ್ಟ್ ರಂಗದಲ್ಲಿ ಹೊಸ ಚೆಂಡಿನೊಂದಿಗೆ ಭರವಸೆಯ ಆಟಗಾರರಂತೆ ಕಾಣುತ್ತಿಲ್ಲ. ನ್ಯೂಜಿಲೆಂಡ್ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಜು. 29 ಮತ್ತು ಆಗಸ್ಟ್ 4ರಂದು ಕ್ರಮವಾಗಿ ನಡೆಯಲಿದೆ.
ಬಳಿಕ ಅವರು ದಕ್ಷಿಣ ಆಫ್ರಿಕಾದ ಡರ್ಬನ್ ಮತ್ತು ಸೆಂಚುರಿಯನ್‌ಯಲ್ಲಿ ಟೆಸ್ಟ್ ಆಡಲು ತೆರಳಲಿದ್ದು, ಅದು ಆಗಸ್ಟ್ 19 ಮತ್ತು 27ರಂದು ಆರಂಭವಾಗಲಿದೆ.
ನ್ಯೂಜಿಲೆಂಡ್ ತಂಡ: ಟ್ರೆಂಟ್ ಬೌಲ್ಟ್, ಡೌಗ್ ಬ್ರೇಸ್‌ವೆಲ್, ಮಾರ್ಕ್ ಕ್ರೈಗ್, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಹೆನ್ರಿ ನಿಕೋಲ್ಸ್, ಲ್ಯೂಕ್ ರಾಂಚಿ, ಜೀತ್ ರಾವಲ್, ಮಿಚೆಲ್ ಸಾಂಟ್ನರ್, ಈಶ್ ಸೋಧಿ, ಟಿಮ್ ಸೌಥೀ, ರೋಸ್ ಟೇಲರ್, ನೀಲ್ ವಾಗ್ನರ್, ವಾಟ್ಲಿಂಗ್, ಕೇನ್ ವಿಲಿಯಂಸನ್ (ನಾಯಕ).
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.