ಶ್ರೀಲಂಕಾ: ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಅಂಗವಿಕಲ ಅಭಿಮಾನಿಯೊಬ್ಬರಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜಯಿಸಿದ ನಂತರ ಸ್ಮೃತಿ ಮಂದಾನ ಅವರು ತನ್ನ ಭೇಟಿಯಾಗಲು ಗಾಲಿಕುರ್ಚಿಯಲ್ಲಿ ತಾಯಿಯೊಂದಿಗೆ ಬಂದಿದ್ದ ಬಾಲಕಿ ಆದಿಶಾ ಹೆರಾತ್ ಎಂಬಾಕೆಗೆ ಮೊಬೈಲ್ ಫೋನ್ ಗಿಫ್ಟ್ ಕೊಟ್ಟರು.
ಪುಟ್ಟ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಸ್ಮೃತಿ, ಮೊಬೈಲ್ ಫೋನ್ ಉಡುಗೊರೆ ನೀಡಿ ಆತ್ಮವಿಶ್ವಾಸ ತುಂಬಿದರು. ಈ ವಿಡಿಯೋವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಾವು ಅನಿರೀಕ್ಷಿತವಾಗಿ ಪಂದ್ಯ ವೀಕ್ಷಿಸಲು ಬಂದಿದ್ದೇವೆ. ನನ್ನ ಮಗಳು ಪಂದ್ಯವನ್ನು ನೋಡಬೇಕು ಎಂದು ಬಯಸಿದ್ದಳು. ಇದೇ ವೇಳೆ ಭಾರತ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಅವರನ್ನು ಭೇಟಿಯಾಗಿ ಅಚ್ಚರಿಯಾಗಿದ್ದು ಖುಷಿಯಾಗಿದೆ. ಅವರಿಂದ ಉಡುಗೊರೆ ಪಡೆದಿದ್ದು ನಮ್ಮ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಆದಿಶಾ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.