ಚೆನ್ನೈ: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಗಳಿಸಿದ ಕರುಣ್ ನಾಯರ್ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕರುಣ್ ನಾಯರ್ ಇಷ್ಟೊಂದು ಯಶಸ್ಸು ಕಾಣಲು ಕಾರಣ ಯಾರು ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
“ತ್ರಿಶತಕ ಭಾರಿಸಿದ ಕರುಣ್ ನಾಯರ್ ಗೆ ಅಭಿನಂದನೆಗಳು. ಇದಕ್ಕೆಲ್ಲಾ ಕಾರಣ ರಾಹುಲ್ ದ್ರಾವಿಡ್. ಎ ತಂಡದ ಕೋಚ್ ಆಗಿರುವ ದ್ರಾವಿಡ್ ಯುವ ಆಟಗಾರರನ್ನು ಉತ್ತಮವಾಗಿ ತಯಾರು ಮಾಡುತ್ತಿದ್ದಾರೆ. ಅವರ ಕಠಿಣ ಪರಿಶ್ರಮದ ಫಲವೇ ಈ ಯುವ ಆಟಗಾರರ ಯಶಸ್ಸು” ಎಂದು ಠಾಕೂರ್ ಹೊಗಳಿದ್ದಾರೆ.
ಸುನಿಲ್ ಗವಾಸ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಕೂಡಾ ಕರುಣ್ ಯಶಸ್ಸಿಗೆ ದ್ರಾವಿಡ್ ರನ್ನು ಹೊಗಳಿದ್ದಾರೆ. ದ್ರಾವಿಡ್ ಯಂಗ್ ಟ್ಯಾಲೆಂಟ್ ಗಳನ್ನು ಉತ್ತಮವಾಗಿ ತರಬೇತುಗೊಳಿಸಿದ್ದಾರೆ. ಅದರ ಪರಿಣಾಮವೇ ಈ ಯಶಸ್ಸು ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇನ್ನೊಂದೆಡೆ ಗವಾಸ್ಕರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆ ಎಲ್ ರಾಹುಲ್ ಮತ್ತು ಕರುಣ್ ನಾಯರ್ ಜೋಡಿಯನ್ನು ರಾಹುಲ್ ದ್ರಾವಿಡ್ ಮತ್ತು ಗುಂಡಪ್ಪ ವಿಶ್ವನಾಥ್ ಗೆ ಹೋಲಿಸಿದ್ದಾರೆ. ವಿಶೇಷವಾಗಿ ಕರುಣ್ ಗೆ ಅಭಿನಂದಿಸಿದ ಗವಾಸ್ಕರ್, ಮುಂದೊಂದು ದಿನ ಆತ ಭಾರತ ತಂಡಕ್ಕೆ ಇನ್ನಷ್ಟು ರನ್ ಗಳಿಸಿಕೊಡಲಿ ಎಂದು ಹಾರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ