ಲಂಡನ್: ಕೋಚ್ ಅನಿಲ್ ಕುಂಬ್ಳೆ ಅಂದರೆ ಹಾಗೆಯೇ. ಆಟಗಾರರು ಸದಾ ಎಲ್ಲದಕ್ಕೂ ಸಿದ್ದರಾಗಿರಬೇಕು ಎಂದು ಬಯಸುತ್ತಾರೆ. ಅಂತಿಪ್ಪ ಕುಂಬ್ಳೆ ಸಾಹೇಬರು ಯುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಕೊಟ್ಟ ಶಾಕ್ ಏನು ಗೊತ್ತಾ?!
ಮೊದಲೇ ಪಾಕಿಸ್ತಾನದ ವಿರುದ್ಧದ ಪಂದ್ಯ. ಒತ್ತಡ ಬೇರೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯಗೆ ಅನಿರೀಕ್ಷಿತವಾಗಿ ಕೋಚ್ ಕುಂಬ್ಳೆ ಸಾಹೇಬರು ಶಾಕ್ ಕೊಟ್ಟರು. ಈ ಪಂದ್ಯದಲ್ಲಿ ಪಾಂಡ್ಯ ಧೋನಿಗೆ ಮೊದಲೇ ಬ್ಯಾಟಿಂಗ್ ಗಿಳಿದು ಬಂದ ಕೂಡಲೇ ಯದ್ವಾ ತದ್ವಾ ಮೂರು ಸಿಕ್ಸರ್ ಸಿಡಿಸಿ ಪಂದ್ಯದ ಗೇರ್ ಬದಲಾಯಿಸಿದ್ದರು.
ಆದರೆ ಅದಕ್ಕಿಂತ ಮೊದಲೇ ಡ್ರೆಸ್ಸಿಂಗ್ ರೂಂನಲ್ಲಿ ಅವರಿಗೆ ಕುಂಬ್ಳೆ ಶಾಕ್ ನೀಡಿದ್ದರು. ಯುವಿ-ಕೊಹ್ಲಿ ಬ್ಯಾಟಿಂಗ್ ನೋಡುತ್ತಾ, ಮುಂದೆ ಹೇಗಿದ್ದರೂ ಧೋನಿ ಬ್ಯಾಟಿಂಗ್ ಗೆ ಇಳಿಯುತ್ತಾರೆ ಎಂದು ಆರಾಮವಾಗಿ ಕೂತಿದ್ದ ಪಾಂಡ್ಯ ಬಳಿ ಬಂದ ಕುಂಬ್ಳೆ ‘ಏಳಪ್ಪಾ.. ಪ್ಯಾಡ್ ಕಟ್ಟಿಕೋ.. ಮುಂದಿನ ಸರದಿ ನಿನ್ನದೇ’ ಅನ್ನಬೇಕೇ?
ಆಗ 46 ನೇ ಓವರ್. ಪಂದ್ಯ ಮುಗಿಯಲು ಇನ್ನೆರಡೇ ಓವರ್ ಬಾಕಿ. ಕ್ಷಣ ಕಾಲ ಗಲಿಬಿಲಿಗೊಳಗಾದ ಪಾಂಡ್ಯ ನಂತರ ಚೇತರಿಸಿಕೊಂಡು ಪ್ಯಾಡ್ ಕಟ್ಟುವಷ್ಟರಲ್ಲಿ ಯುವಿ ಔಟಾಗಿದ್ದರು. ಗ್ಲೌಸ್ ಹಾಕುತ್ತಲೇ ಪಾಂಡ್ಯ ಮೈದಾನಕ್ಕಿಳಿದರು. ಬಂದವರೇ ಅದೇ ಶಾಕ್ ನಲ್ಲಿ ಮೂರು ಸತತ ಸಿಕ್ಸರ್ ಚಚ್ಚಿದರು.