ಮುಂಬೈ: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಕೆಎಲ್ ರಾಹುಲ್ ಗೆ ಟಿ20 ಸರಣಿಗೆ ಉಪನಾಯಕತ್ವದ ಪಟ್ಟ ಕಟ್ಟಲಾಗಿದೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರೊಬ್ಬರು ಅಪಸ್ವರವೆತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ, ದೀಪ್ ದಾಸ್ ಗುಪ್ತಾ.
ಕೆಎಲ್ ರಾಹುಲ್ ರನ್ನು ಇಷ್ಟು ಅವಸರದಲ್ಲಿ ಉಪ ನಾಯಕ ಎಂದು ಘೋಷಣೆ ಮಾಡಬಾರದಿತ್ತು. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳುವವರೆಗೆ ಕಾಯಬಹುದಿತ್ತು. ಒಂದು ವೇಳೆ ಅವರು ಮುಂಬೈ ಇಂಡಿಯನ್ಸ್ ಪರ ಆಡಲು ಫಿಟ್ ಆದರೆ ಟೀಂ ಇಂಡಿಯಾಕ್ಕೂ ಬರಬಹುದು. ಅದಕ್ಕಿಂತ ಮೊದಲೇ ಅವಸರದಲ್ಲಿ ರಾಹುಲ್ ರನ್ನು ಉಪನಾಯಕನಾಗಿ ಘೋಷಿಸಿದ್ದು ಸರಿಯಲ್ಲ ಎಂದು ದೀಪ್ ದಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಇನ್ನೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಕೂಡಾ ಈಗ ಗಾಯಗೊಂಡಿದ್ದಾರೆ. ಆದರೆ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ಹಾಗಿದ್ದರೆ ರೋಹಿತ್ ಕೂಡಾ ಮುಂದೆ ಚೇತರಿಸಿಕೊಳ್ಳಬಹುದು, ಅವರನ್ನು ಯಾಕೆ ಆಯ್ಕೆ ಮಾಡಲಾಗಿಲ್ಲ ಎಂದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.