Publish Date: Sun, 10 Sep 2017 (11:53 IST)
Updated Date: Sun, 10 Sep 2017 (11:56 IST)
ಮುಂಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗುತ್ತಾರಾ? ಅಥವಾ ಬಿಸಿಸಿಐ ಆಯ್ಕೆಗಾರರು ಅಶ್ವಿನ್ ರಂತಹ ಪ್ರಮುಖ ಆಟಗಾರರನ್ನೇ ಹೊರಗಿಡುವ ಧೈರ್ಯ ಮಾಡುತ್ತಾ?
ಈ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಸದ್ಯ ಕೌಂಟಿ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರುವ ಅಶ್ವಿನ್ ಆಸೀಸ್ ಸರಣಿಗೆ ಲಭ್ಯರಾಗಬೇಕಾದರೆ ಕೌಂಟಿ ಕ್ರಿಕೆಟ್ ನ್ನು ಅರ್ಧದಲ್ಲಿಯೇ ಬಿಟ್ಟು ಬರಬೇಕಾಗುತ್ತದೆ. ತಾನು ಯಾವುದಕ್ಕೂ ರೆಡಿ ಎಂಬಂತೆ ಅಶ್ವಿನ್ ಈಗಾಗಲೇ ಹೇಳಿಕೆ ನೀಡಿದ್ದರು.
ಇದೀಗ ಚೆಂಡು ಬಿಸಿಸಿಐ ಅಂಗಳದಲ್ಲಿದೆ. ಅಶ್ವಿನ್ ಗೆ ಇಂಗ್ಲೆಂಡ್ ಪರಿಸ್ಥಿತಿಯಲ್ಲಿ ಆಡಲು ಅನುಭವವಾಗಲಿ ಎಂದು ಬಿಸಿಸಿಐಯೇ ಕೌಂಟಿಯಲ್ಲಿ ಆಡಲು ಅನುಮತಿ ನೀಡಿತ್ತು. ಒಂದು ವೇಳೆ ಅಶ್ವಿನ್ ಗೆ ಕೌಂಟಿ ಕ್ರಿಕೆಟ್ ಆಡಲು ಬಿಸಿಸಿಐ ಅನುಮತಿಸಿದರೆ ಆಸೀಸ್ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಅಲಭ್ಯರಾಗಲಿದ್ದಾರೆ. ಅವರ ಸ್ಥಾನದಲ್ಲಿ ಯಜುವೇಂದ್ರ ಚಾಹಲ್ ಅವಕಾಶ ಪಡೆಯಲಿದ್ದಾರೆ.