ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆದ ರೋಚಕ ಟಿ 20 ಪಂದ್ಯದಲ್ಲಿ ಜಿಂಬಾಬ್ವೆಯ 170 ರನ್ ಬೆನ್ನತ್ತಿದ ಭಾರತ ಒಂದು ಹಂತದಲ್ಲಿ ಗೆಲ್ಲುವ ಭರವಸೆ ಮೂಡಿಸಿದ್ದರೂ ಕೊನೆಯ ಓವರಿನಲ್ಲಿ ಗೆಲುವಿನ ರನ್ ಸ್ಕೋರ್ ಮಾಡುವಲ್ಲಿ ವಿಫಲವಾಗಿ 2 ರನ್ ಅಂತರದಿಂದ ಸೋತಿದೆ. ಕೊನೆಯ ಓವರಿನಲ್ಲಿ ಗೆಲ್ಲುವುದಕ್ಕೆ 8 ರನ್ ಅಗತ್ಯವಿತ್ತು. ಭಾರತದ ಪರ ಲೋಕೇಶ್ ರಾಹುಲ್ ಮೊದಲ ಎಸೆತದಲ್ಲಿ ಔಟಾಗಿದ್ದು ಭಾರತಕ್ಕೆ ದೊಡ್ಡ ಪೆಟ್ಟಾಗಿತ್ತು.
ರಾಹುಲ್ ಬಳಿಕ ರಾಯುಡು ಮತ್ತು ಮಂದೀಪ್ ಸಿಂಗ್ ವಿಕೆಟ್ ಕಳೆದುಕೊಂಡು ಭಾರತ 90 ರನ್‌ಗೆ 12. 2 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಆದರೆ ಮನೀಶ್ ಪಾಂಡೆ ಉತ್ತಮ ಸ್ಕೋರ್ ಮಾಡಿ 35 ಎಸೆತಗಳಲ್ಲಿ 48 ರನ್ ದಾಖಲಿಸಿ ಮುಜಾರಾಬಾನಿ ಎಸೆತಕ್ಕೆ ಔಟ್ ಆದರು. ಪಾಂಡೆ ಔಟಾದ ಮೇಲೆ ಧೋನಿ ಮೇಲೆ ಭರವಸೆ ಇಡಲಾಗಿತ್ತು. ಭಾರತಕ್ಕೆ ಕೊನೆಯ ಓವರಿನಲ್ಲಿ 8 ರನ್ ಅಗತ್ಯವಿದ್ದು ಸುಲಭವಾಗಿ ಗೆಲುವು ದಕ್ಕುವ ಸಾಧ್ಯತೆಯಿತ್ತು.
ಆದರೆ ಧೋನಿ ಕೊನೆಯ ಓವರಿನ ಮೊದಲ ಎಸೆತದಲ್ಲಿ ಒಂದು ರನ್ ತೆಗೆದುಕೊಂಡಿದ್ದು ದುಬಾರಿಯಾಗಿ ಪರಿಣಮಿಸಿತು. ಮರು ಎಸೆತದಲ್ಲೇ ಅಕ್ಸರ್ ಮ್ಯಾಡ್ಜಿವಾಗೆ ಔಟಾದರು. ನಂತರ ಆಡಲಿಳಿದ ರಿಷಿಧವನ್ 2 ಎಸೆತಗಳನ್ನು ವ್ಯರ್ಥ ಮಾಡಿ ಒಂದು ರನ್ ಓಡಿದರು. ಕೊನೆಯ ಎಸೆತದಲ್ಲಿ ಧೋನಿಗೆ 4 ರನ್ ಅಗತ್ಯವಿತ್ತು. ಆದರೆ ಧೋನಿಗೆ ಒಂದು ರನ್ ಮಾತ್ರ ಹೊಡೆಯಲು ಸಾಧ್ಯವಾಗಿ ಜಿಂಬಾಬ್ವೆ 2 ರನ್ ಅಂತರದಿಂದ ಟಿ 20 ಮೊದಲ ಪಂದ್ಯವನ್ನು ಗೆದ್ದುಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.