ವಡೋದರಾ: ಡಬ್ಲ್ಯುಪಿಎಲ್ 2026 ಬಹುನಿರೀಕ್ಷಿತ ಫೈನಲ್ ಪಂದ್ಯ ಇಂದು ನಡೆಯಲಿದೆ. ಆರ್ ಸಿಬಿ ಈಗಾಗಲೇ ಫೈನಲ್ ಗೇರಿದ್ದು 2024 ರ ಅದೇ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಂತಿಮ ಹೋರಾಟ ನಡೆಸಲಿದೆ.
ಇದುವರೆಗೆ ಮೂರು ಡಬ್ಲ್ಯುಪಿಎಲ್ ಆವೃತ್ತಿ ನಡೆದಿದೆ. ಈ ಪೈಕಿ ಎರಡು ಬಾರಿ ಮುಂಬೈ ಒಮ್ಮೆ ಆರ್ ಸಿಬಿ ಕಪ್ ಗೆದ್ದಿದೆ. ಆರ್ ಸಿಬಿ ಪುರುಷರ ತಂಡವೂ ಕಪ್ ಗೆದ್ದಿರಲಿಲ್ಲ. ಅದಕ್ಕೆ ಮೊದಲೇ 2024 ರಲ್ಲಿ ಮೊದಲ ಬಾರಿಗೆ ಡಬ್ಲ್ಯುಪಿಎಲ್ ಕಪ್ ಗೆದ್ದು ಮಹಿಳೆಯರು ಇತಿಹಾಸ ಬರೆದಿದ್ದರು.
ಆದರೆ ಕಳೆದ ಆವೃತ್ತಿಯಲ್ಲಿ ಮತ್ತೆ ತಂಡ ಸತತ ಸೋಲಿನಿಂದ ಸೋತು ಹೋಗಿತ್ತು. ಈ ಬಾರಿ ಮತ್ತೆ ಆರ್ ಸಿಬಿ ಫೈನಲ್ ಗೇರಿದೆ. ಕಳೆದ ಬಾರಿಗೆ ಹೋಲಿಸಿದರೆ ಆರ್ ಸಿಬಿ ಈಗ ಬಲಿಷ್ಠ ತಂಡವಾಗಿದೆ. ಲೀಗ್ ಪಂದ್ಯಗಳಲ್ಲೇ ಅತೀ ಹೆಚ್ಚು ಗೆಲುವು ಸಾಧಿಸಿ ನೇರ ಫೈನಲ್ ಗೇರಿದ ಸಾಧನೆ ಮಾಡಿದೆ. ಹೀಗಾಗಿ ಎರಡನೇ ಸಲ ಕಪ್ ನಮ್ದು ಎನ್ನುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕರೂ ಅಚ್ಚರಿಯಿಲ್ಲ.
ಆದರೆ ಡೆಲ್ಲಿ ಕೂಡಾ ಇದು ಎರಡನೇ ಬಾರಿಗೆ ಫೈನಲ್ ಗೇರಿದೆ. ಕಳೆದ ಬಾರಿ ಇದೇ ಆರ್ ಸಿಬಿ ವಿರುದ್ಧ ಫೈನಲ್ ನಲ್ಲಿ ಸೋತಿತ್ತು. ಈ ಬಾರಿ ಆರಂಭದಲ್ಲಿ ಲೀಗ್ ಹಂತದ ಪಂದ್ಯಗಳಲ್ಲಿ ಪೇಲವ ಪ್ರದರ್ಶನ ತೋರಿದ್ದರೂ ನಂತರ ಸಿಡಿದೆದ್ದಿದೆ. ಶಫಾಲಿ ವರ್ಮ, ಜೆಮಿಮಾ ರೊಡ್ರಿಗಸ್, ಲಿಝೆಲ್ಲೇ ಲೀ, ಲೌರಾ ತಂಡದ ಬ್ಯಾಟಿಂಗ್ ಶಕ್ತಿಗಳು. ಲೀಗ್ ಹಂತದಲ್ಲಿ ಆರ್ ಸಿಬಿ ವಿರುದ್ಧ ಸತತ ಸೋಲು ಕಂಡಿರುವ ಡೆಲ್ಲಿಗೆ ಈಗ ಫೈನಲ್ ನಲ್ಲಿ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕವಿದೆ. ಡೆಲ್ಲಿ ಕೂಡಾ ಇದುವರೆಗೆ ಮಹಿಳೆಯರು ಮಾತ್ರವಲ್ಲ, ಪುರುಷರ ತಂಡವೂ ಕಪ್ ಗೆದ್ದಿಲ್ಲ. ಹೀಗಾಗಿ ಕಪ್ ಗೆಲ್ಲುವ ಛಲ ಡೆಲ್ಲಿಗೂ ಪ್ರಬಲವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.