Publish Date: Sat, 16 Mar 2024 (10:50 IST)
Updated Date: Sat, 16 Mar 2024 (10:55 IST)
ನವದೆಹಲಿ: ಡಬ್ಲ್ಯುಪಿಎಲ್ ಪ್ಲೇ ಆಫ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ ಗಳ ರೋಚಕ ಗೆಲುವು ಸಾಧಿಸಿದ ಆರ್ ಸಿಬಿ ಪಡೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಮೊದಲ ಬಾರಿಗೆ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡ ಫೈನಲ್ ಗೇರಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಮೇರೆ ಇಲ್ಲದಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಕೊನೆಯ ಕ್ಷಣದಲ್ಲಿ 5 ರನ್ ಗಳಿಂದ ಆರ್ ಸಿಬಿ ರೋಚಕವಾಗಿದ್ದ ಗೆದ್ದ ಬಳಿಕ ಬೆಂಗಳೂರಿನಲ್ಲೂ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲಿ ಪ್ರಯಾಣಿಕರು ಮೈದಾನದಲ್ಲಿದ್ದಂತೇ ಆರ್ ಸಿಬಿ ಆರ್ ಸಿಬಿ ಎಂದು ಜೋರಾಗಿ ಕೂಗಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ ಸಿಬಿ ಎಂದು ಮಾತ್ರವಲ್ಲದೆ, ಈ ಗೆಲುವಿನ ರೂವಾರಿಯಾಗಿದ್ದ ಎಲ್ಲಿಸ್ ಪೆರ್ರಿ ಹೆಸರೆತ್ತಿ ಕೂಗಿಯೂ ಸಂಭ್ರಮಿಸಿದ್ದಾರೆ.
ಐಪಿಎಲ್ ಇರಲಿ ಡಬ್ಲ್ಯುಪಿಎಲ್ ಇರಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರುವಷ್ಟು ವಿಧೇಯ ಅಭಿಮಾನಿಗಳು ಎಲ್ಲೂ ಇಲ್ಲ ಎಂದು ಆಟಗಾರರೂ ಒಪ್ಪಿಕೊಳ್ಳುತ್ತಾರೆ. ನಿನ್ನೆಯೂ ಸ್ಮೃತಿ ಮಂಧಾನ ಟಾಸ್ ಸಂದರ್ಭದಲ್ಲಿ ಮೈದಾನದಲ್ಲಿ ಮಾತನಾಡಲು ಹೊರಟಾಗಲೂ ಅಭಿಮಾನಿಗಳು ಜೋರಾಗಿ ಕೂಗಿ ಚಿಯರ್ ಅಪ್ ಮಾಡಿದ್ದರು.