ದುಬೈ: ಯಾವುದೇ ಐಸಿಸಿ ಕೂಟಗಳಿರಲಿ, ಫೈನಲ್ ತನಕ ಟೀಂ ಇಂಡಿಯಾ ಬಂದರೆ ಆಯೋಜಕರಿಗೆ ಲಾಭವೋ ಲಾಭ. ಎಲ್ಲಾ ಟೂರ್ನಿಗಳ ಆಯೋಜಕರೂ ಟೀಂ ಇಂಡಿಯಾ ಫೈನಲ್ ಗೆ ಬರಲಿ ಎಂದು ಆಶಿಸುವುದು ಇದೇ ಕಾರಣಕ್ಕೆ.
ಇತ್ತೀಚೆಗಷ್ಟೇ ನಡೆದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಫೈನಲ್ ಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿತ್ತು. ಫೈನಲ್ ಪಂದ್ಯವನ್ನು 80 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿ ದಾಖಲೆ ಮಾಡಿದ್ದಾರೆ.
ಟೀಂ ಇಂಡಿಯಾ ಆಡುವ ಪಂದ್ಯಗಳೆಂದರೆ ವಿಶ್ವದ ಯಾವುದೇ ಮೂಲೆಯಲ್ಲಾದರೂ ಮೈದಾನ ಭರ್ತಿಯಾಗಿರುತ್ತದೆ. ಟಿವಿ ವೀಕ್ಷಣೆಯೂ ಹೆಚ್ಚಾಗುತ್ತದೆ. ಹೀಗಾಗಿ ಜಾಹೀರಾತುದಾರರೂ ಹೆಚ್ಚಾಗುತ್ತಾರೆ. ಹೀಗಾಗಿ ಆಯೋಜಕರಿಗೆ ಭರ್ಜರಿ ಲಾಭವಾಗುತ್ತದೆ.
ಇದೀಗ ಮುಂಬರುವ ಐಸಿಸಿ ಟೂರ್ನಿ ಎಂದರೆ ಡಬ್ಲ್ಯುಟಿಸಿ ಫೈನಲ್. ಟೆಸ್ಟ್ ವಿಶ್ವಕಪ್ ಎಂದೇ ಪರಿಗಣಿತವಾಗಿರುವ ಈ ಪಂದ್ಯ ಈಗ ಮೂರನೇ ಆವೃತ್ತಿಗೆ ಕಾಲಿಟ್ಟಿದೆ. ಮೊದಲ ಎರಡು ಆವೃತ್ತಿಯಲ್ಲೂ ಟೀಂ ಇಂಡಿಯಾ ಇತ್ತು. ಆದರೆ ಈಗ ಮೂರನೇ ಆವೃತ್ತಿಗೆ ಟೀಂ ಇಂಡಿಯಾ ಕ್ವಾಲಿಫೈ ಆಗಿಲ್ಲ. ಹೀಗಾಗಿ ಈಗ ಆಯೋಜಕರಿಗೆ ಬರೋಬ್ಬರಿ 45 ಕೋಟಿ ರೂ. ನಷ್ಟವಾಗಲಿದೆಯಂತೆ. ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ಜುಲೈ 10-14 ರವರೆಗೆ ನಡೆಯಲಿದೆ. ಈ ಬಾರಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಫೈನಲ್ ನಡೆಯಲಿದೆ. ಒಂದು ವೇಳೆ ಭಾರತ ಫೈನಲ್ ಗೆ ಬಂದರೆ ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ದರವನ್ನೂ ಏರಿಸಲಾಗಿತ್ತು. ಆದರೆ ಈಗ ಭಾರತ ಫೈನಲ್ ನಲ್ಲಿ ಆಡದೇ ಇರುವುದರಿಂದ ಮೈದಾನಕ್ಕೆ ಜನರನ್ನು ಸೆಳೆಯುವ ನಿಟ್ಟಿನಿಂದ ಟಿಕೆಟ್ ದರವನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ಇದರಿಂದಾಗಿ ಭಾರೀ ನಷ್ಟವಾಗಲಿದೆ ಎಂದು ತಿಳಿದುಬಂದಿದೆ.