Publish Date: Fri, 19 Apr 2024 (12:05 IST)
Updated Date: Fri, 19 Apr 2024 (12:08 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ಮೇಲೆ ರೋಹಿತ್ ಶರ್ಮಾ ರಿಲ್ಯಾಕ್ಸ್ ಆಗಿದ್ದಾರೆ. ಆದರೆ ರೋಹಿತ್ ಇದೀಗ ಮುಂಬೈನಲ್ಲಿ ಪಂದ್ಯವಿದ್ದಾಗ ತನ್ನ ತಂಡದ ಜೊತೆ ಉಳಿದುಕೊಳ್ಳಲ್ಲವಂತೆ. ಅದಕ್ಕೆ ಕಾರಣವೇನೆಂದು ಅವರು ವಿವರಿಸಿದ್ದಾರೆ.
ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಪಂದ್ಯಗಳನ್ನು ತವರಿನಲ್ಲಿಯೇ ಆಡಿದೆ. ಈ ಎಲ್ಲಾ ಪಂದ್ಯಗಳಿಗೂ ರೋಹಿತ್ ತಮ್ಮ ಮನೆಯಲ್ಲೇ ಉಳಿದುಕೊಂಡು ತಂಡವನ್ನು ಕೂಡಿಕೊಂಡಿದ್ದಾರೆ. ತಂಡದ ಜೊತೆ ಹೋಟೆಲ್ ರೂಂನಲ್ಲಿ ವಾಸ್ತವ್ಯ ಹೂಡಿಲ್ಲ. ಸದ್ಯಕ್ಕೆ ನಾಯಕತ್ವದ ಹೊಣೆಯಿಲ್ಲದೇ ಇರುವುದರಿಂದ ರೋಹಿತ್ ರಿಲ್ಯಾಕ್ ಆಗಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ನನಗೆ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಸಾಕಷ್ಟು ಸಮಯ ಸಿಗುತ್ತಿದೆ. ಕಳೆದ ನಾಲ್ಕು ಪಂದ್ಯಗಳು ಮುಂಬೈನಲ್ಲಿ ನಡೆದಿತ್ತು. ಎಲ್ಲಾ ಪಂದ್ಯಗಳಿಗೂ ನಾನು ಮನೆಯಿಂದಲೇ ಟೀಂ ಮೀಟಿಂಗ್ ಗೆ ಒಂದು ಗಂಟೆ ಮೊದಲು ತಲುಪುವಂತೆ ಬಂದಿದ್ದೆ. ಇದು ನನಗೆ ವಿಭಿನ್ನ ಅನುಭವ ಜೊತೆಗೆ ಖುಷಿ ಕೊಡುತ್ತಿದೆ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ಮೇಲೆ ರೋಹಿತ್ ಶರ್ಮಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಹಾಗಿದ್ದರೂ ರೋಹಿತ್ ಈ ಟೂರ್ನಿಯಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೆಲವರು ಈಗಾಗಲೇ ಮುಂಬೈ ಇಂಡಿಯನ್ಸ್ ನಲ್ಲಿ ರೋಹಿತ್ ಗೆ ಇದೇ ಕೊನೆಯ ಐಪಿಎಲ್ ಆಗಿರಬಹುದು ಎನ್ನುತ್ತಿದ್ದಾರೆ. ಮುಂದಿನ ಐಪಿಎಲ್ ವೇಳೆಗೆ ಅವರು ಬೇರೆ ತಂಡ ಕೂಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲವೂ ಇದೆ.