Publish Date: Fri, 19 Apr 2024 (08:45 IST)
Updated Date: Fri, 19 Apr 2024 (08:52 IST)
ಲಕ್ನೋ: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಲಿದೆ. ಇಂದಿನ ಪಂದ್ಯ ಲಕ್ನೋ ಮೈದಾನದಲ್ಲಿ ನಡೆಯಲಿದೆ.
ಇದು ಸತತ ಎರಡು ಸೋಲು ಮತ್ತು ಸತತ ಎರಡು ಗೆಲುವು ಕಂಡ ತಂಡಗಳ ನಡುವಿನ ಪಂದ್ಯ. ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಸೋತಿತ್ತು. ಹೀಗಾಗಿ ಇಂದು ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ಸಿಎಸ್ ಕೆಯನ್ನು ಮಣಿಸಲೇಬೇಕಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಪಂದ್ಯದಲ್ಲಿ ಉತ್ತಮವಾಗಿಯೇ ಆಡಿತ್ತು. ಸತತ ಗೆಲುವುಗಳೊಂದಿಗೆ ಕೆಎಲ್ ರಾಹುಲ್ ಪಡೆ ಅಂಕಪಟ್ಟಿಯಲ್ಲಿ ಅಗ್ರ ಮೂರರೊಳಗೆ ಇತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಲಕ್ನೋ ಈಗ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಜಾರಿದೆ. ಇತ್ತ ಡೆಲ್ಲಿ ಕೂಡಾ ನೆಟ್ ರನ್ ರೇಟ್ ನಲ್ಲಿ ಪೈಪೋಟಿ ನೀಡುತ್ತಿರುವುದರಿಂದ ಲಕ್ನೋಗೆ ಈಗ ಗೆಲುವು ಅನಿವಾರ್ಯವಾಗಿದೆ. ಸದ್ಯಕ್ಕೆ ಲಕ್ನೋ 6 ಪಂದ್ಯಗಳಿಂದ 3 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಟೂರ್ನಿಯಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಸೋತಿದೆ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಕಂಡಿದೆ. ಅದರಲ್ಲೂ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಎರಡು ಗೆಲುವು ಕಂಡಿದೆ. ತಂಡದ ಬ್ಯಾಟಿಂಗ್ ನಲ್ಲಿ ನಾಯಕ ಋತುರಾಜ್ ಗಾಯಕ್ ವಾಡ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕೊನೆಯಲ್ಲಿ ಬಂದು ಧೋನಿ ಉತ್ತಮ ಫಿನಿಶ್ ನೀಡುತ್ತಿದ್ದಾರೆ. ಬೌಲಿಂಗ್ ನಲ್ಲೂ ಪತಿರಾಣ ಫಾರ್ಮ್ ತಂಡಕ್ಕೆ ಪ್ಲಸ್ ಪಾಯಿಂಟ್. ಇಂದಿನ ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.