ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲು ಇಶಾನ್ ಕಿಶನ್ ಬ್ಯಾಟಿಂಗ್ ಗಿಳಿದಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಕೊಹ್ಲಿ ಕ್ರಮಾಂಕದಲ್ಲಿ ಇಶಾನ್ ರನ್ನು ಬ್ಯಾಟಿಂಗ್ ಗಿಳಿಸಿದ್ದಕ್ಕೆ ನಾಯಕ ರೋಹಿತ್ ಶರ್ಮಾ ಮೇಲೆ ಕೊಹ್ಲಿ ಫ್ಯಾನ್ಸ್ ಗರಂ ಆಗಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರೋಹಿತ್ ರನ್ನು ನಿಂದಿಸುತ್ತಿದ್ದರು. ಆದರೆ ಇಶಾನ್ ಕಿಶನ್ ಹೇಳಿಕೆ ಎಲ್ಲಾ ಅನುಮಾನಗಳನ್ನು ದೂರ ಮಾಡಿದೆ.
ನಿನ್ನೆಯ ದಿನದಾಟದ ಬಳಿಕ ಮಾತನಾಡಿದ ಇಶಾನ್ ಕಿಶನ್ ನನ್ನನ್ನು ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಹೋಗಲು ಹೇಳಿದ್ದೇ ವಿರಾಟ್ ಕೊಹ್ಲಿ ಎಂದಿದ್ದಾರೆ ಇಶಾನ್. ವಿರಾಟ್ ಭಾಯಿ ನನ್ನನ್ನು ಈ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸೂಚಿಸಿದರು. ಸ್ಲೋ ಲೆಫ್ಟ್ ಆರ್ಮರ್ ಬೌಲಿಂಗ್ ಮಾಡುತ್ತಿದ್ದರು. ಹೀಗಾಗಿ ವೇಗವಾಗಿ ರನ್ ಗಳಿಸಲು ನನ್ನನ್ನೇ ಅವರ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯಲು ಸೂಚಿಸಿದರು. ನಿನ್ನ ನ್ಯಾಚುರಲ್ ಗೇಮ್ ಆಡು ಎಂದರು. ಕೆಲವೊಮ್ಮೆ ತಂಡಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ ಇಶಾನ್. ಈ ಇನಿಂಗ್ಸ್ ನಲ್ಲಿ ಇಶಾನ್ 34 ಎಸೆತಗಳಿಂದ ಅಜೇಯ 52 ರನ್ ಸಿಡಿಸಿದ್ದರು.