ಪುಣೆ: ವಿಶ್ವದ ನಂ.1 ಇನ್ ಫಾರ್ಮ್ ಬ್ಯಾಟ್ಸ್ ಮನ್. ಎದುರಾಳಿಗಳೂ ಹೇಗಪ್ಪಾ ಇವನನ್ನು ಪೆವಿಲಿಯನ್ ಗೆ ಕಳುಹಿಸೋದು ಎಂದು ತಲೆಕಡಿಸಿಕೊಳ್ಳುತ್ತಿರುವಾಗ, ಬಯಸದೇ ಬಂದ ಭಾಗ್ಯ ಎನ್ನುವಂತೆ ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್ ಮನ್ ಬಂದ ಬಾಲ್ ಗೇ ಔಟಾದರೆ ಹೇಗಿರಬೇಡ?!
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಅಂತಹದ್ದೊಂದು ಪರಿಸ್ಥಿತಿಗೆ ಪುಣೆ ಮೈದಾನ ಬಂದಿತ್ತು. ಇದು ಬೌಲರ್ ಗಳ ಪಿಚ್, ಬ್ಯಾಟ್ಸ್ ಮನ್ ಗಳಿಗೆ ಸುಲಭವಲ್ಲ.. ಅದೇನೇ ಇದ್ದರೂ ಕೊಹ್ಲಿ ಎದುರು ನಿಲ್ಲದು ಎಂದೇ ಎಲ್ಲರೂ ಭಾವಿಸಿದ್ದರು. ಎದುರಾಳಿಗಳೂ ಸಹಿತ.
ಆದರೆ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಹೊರ ಹೋಗುವ ಚೆಂಡನ್ನು ಕೆಣಕಲು ಹೋಗಿ ಮೊದಲ ಬಾಲ್ ಗೇ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದಾಗ ಕೊಹ್ಲಿ ಮಾತ್ರವಲ್ಲ, ಆಸೀಸ್ ಫೀಲ್ಡರ್ ಗಳಿಗೂ ನಂಬಲಾಗಲಿಲ್ಲ. ಮೈದಾನದಲ್ಲಿದ್ದ ಪ್ರೇಕ್ಷಕರೂ ಬಾಯಿ ತೆರೆದು ಸ್ತಬ್ಧರಾಗಿ ಕುಳಿತಲ್ಲಿಯೇ ಶಿಲೆಯಾಗಿದ್ದರು. ಆಸ್ಟ್ರೇಲಿಯಾ ಫೀಲ್ಡರ್ ಗಳ ಸಂಭ್ರಮ ಮುಗಿಲು ಮುಟ್ಟಿತ್ತು. ತಲೆ ಆಡಿಸುತ್ತಲೇ ಭಾರವಾದ ಹೆಜ್ಜೆಗಳೊಂದಿಗೆ ಪೆವಿಲಿಯನ್ ಗೆ ಮರಳುತ್ತಿದ್ದ ಕೊಹ್ಲಿ ಬೌಂಡರಿ ಗೆರೆ ಬಳಿ ಅರೆ ಕ್ಷಣ ನಿಂತು ಮನಸ್ಸಿಲ್ಲದ ಮನಸ್ಸಿನಿಂದ ಪೆವಿಲಿಯನ್ ಗೆ ಮರಳಿದರು.
ಆಗ ಭಾರತದ ಸ್ಕೋರ್ ಮೂರು ವಿಕೆಟ್ ಕಳೆದುಕೊಂಡು ಕೇವಲ 44 ರನ್. ನಂಬಿಕಸ್ಥ ಚೇತೇಶ್ವರ ಪೂಜಾರ ಕೂಡಾ ಇಂದು ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಫ್ ಸ್ಟಂಪ್ ನಾಚೆ ನಿಖರವಾಗಿ ಬೌಲಿಂಗ್ ಮಾಡುವುದರಲ್ಲಿ ಆಸೀಸ್ ಯಾವತ್ತೂ ನಂ.1. ಇಂತಹ ಬಾಲ್ ಗಳನ್ನು ಎದುರಿಸುವಾಗ ಎಡವುದರಲ್ಲಿ ಭಾರತೀಯರೂ ನಂ.1 ಹಾಗಾಗಿ ಭಾರತಕ್ಕೆ ಈ ಸ್ಥಿತಿ ಬಂದೊದಗಿತ್ತು.
ಇದ್ದವರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಪರವಾಗಿಲ್ಲ. ಕಳೆದ ಟೆಸ್ಟ್ ಪಂದ್ಯಗಳಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು, ಹೊರ ಹೋಗುವ ಬಾಲ್ ಗಳನ್ನು ಕೆಣಕುವ ಯತ್ನವೂ ಮಾಡದೇ ಜಾಣ್ಮೆಯಿಂದ ಆಡಿದರು. ಅವರು ಹೊಡೆದ ಒಂದೆರಡು ಕವರ್ ಡ್ರೈವ್ ರಾಹುಲ್ ದ್ರಾವಿಡ್ ರನ್ನು ನೆನಪಿಸುವಂತಿತ್ತು.
ಭಾರತಕ್ಕೀಗ ತಾಳ್ಮೆಯಿಂದ, ತಳವೂರಿ ಆಡುವ ಜತೆಯಾಟದ ಆವಶ್ಯಕತೆಯಿದೆ. ಇಂತಹ ಪಿಚ್ ನಲ್ಲಿ 250 ರನ್ ಕೂಡಾ ನಿರ್ಣಾಯಕವೇ. ಆದರೆ ಅಷ್ಟು ಮಾಡಬೇಕಾದರೆ ತಾಳ್ಮೆಯಿಂದ ಇನಿಂಗ್ಸ್ ಕಟ್ಟುವ ಕೆಲಸವಾಗಬೇಕಿದೆ. ಊಟದ ವಿರಾಮಕ್ಕೆ ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 70 ರನ್. ಮೊದಲ ಇನಿಂಗ್ಸ್ ಮೊತ್ತ ದಾಟಬೇಕಾದರೆ ಇನ್ನೂ ರನ್ ಗಳ ಅಗತ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ