ಗಲ್ಲಿ ಕ್ರಿಕೆಟ್ ಭಾರತದಲ್ಲಿ ಬಲು ಫೇಮಸ್. ಎಷ್ಟೋ ಪ್ರತಿಭಾವಂತ ಕ್ರಿಕೆಟಿಗರು ಇಲ್ಲಿಂದಲೇ ಬೆಳಕಿಗೆ ಬಂದಿದ್ದಾರೆ. ಇದೀಗ ಗಲ್ಲಿ ಕ್ರಿಕೆಟ್ ಆಡುತ್ತಿರುವ ಬಾಲಕನೊಬ್ಬನ ಬೌಲಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಲ್ಕೈದು ಹುಡುಗರು ಸೇರಿಕೊಂಡು ಹಳ್ಳಿಯ ಕಿರಿದಾದ ಜಾಗದಲ್ಲಿ ಕ್ರಿಕೆಟ್ ಆಡುತ್ತಾರೆ. ಇವರ ಬಳಿ ನೆಟ್ಟಗೆ ವಿಕೆಟ್ ಕೂಡಾ ಇಲ್ಲ. ಆದರೂ ಈ ಹುಡುಗರ ಉತ್ಸಾಹಕ್ಕೇನೂ ಕೊರತೆಯಿಲ್ಲ. ಈ ಪೈಕಿ ಒಬ್ಬ ಹುಡುಗ ಪಕ್ಕಾ ವೃತ್ತಿಪರ ಬೌಲರ್ ನಂತೆ ಬೌಲಿಂಗ್ ಮಾಡುತ್ತಾನೆ.
ವೃತ್ತಿಪರನಂತೆ ರನ್ ಅಪ್ ಮಾಡಿ ಕರಾರುವಾಕ್ ಆಗಿ ವಿಕೆಟ್ ಗೇ ಬಾಲ್ ಎಸೆಯುತ್ತಾನೆ. ಆತನ ಬೌಲಿಂಗ್ ಎಷ್ಟು ನಿಖರವಾಗಿತ್ತು ಎಂದರೆ ಎದುರಿಗಿದ್ದ ಹುಡುಗನಿಗೆ ಹೊಡೆಯಲು ಸಾಧ್ಯವಾಗುವುದು ಬಿಡಿ ಲೆಗ್ ಸ್ಟಂಪೇ ಮುರಿದು ಬೀಳುತ್ತದೆ.
ಈ ಬಾಲಕನ ಬೌಲಿಂಗ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈತನಿಗೆ ಸರಿಯಾದ ಟ್ರೈನಿಂಗ್ ನೀಡಿದರೆ ಮುಂದೊಂದು ದಿನ ಅದ್ಭುತ ಬೌಲರ್ ಆಗುತ್ತಾನೆ ಎಂದು ಜನ ಕಾಮೆಂಟ್ ಮಾಡಿದ್ದಾರೆ.