ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 60 ರನ್ ಗಳ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಳೆಯಿಂದಾಗಿ ಆಟ ಪೂರ್ತಿ ನಡೆಯಲಿಲ್ಲ. ಹೀಗಾಗಿ ವಿಜೆಡಿ ನಿಯಮ(ಡಕ್ ವರ್ತ್ ಲೂಯಿಸ್ ನಿಯಮಕ್ಕೆ ಸಮಾನವಾಗಿ ದೇಶೀಯವಾಗಿ ಬಳಸುವ ನಿಯಮ)ದ ಪ್ರಕಾರ ಫಲಿತಾಂಶ ನಿರ್ಧರಿಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು 49.5 ಓವರ್ ಆಡಿ 252 ರನ್ ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ 23 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 146 ರನ್ ಗಳಿಸುವಷ್ಟರಲ್ಲಿ ಮಳೆಯ ಆಗಮನವಾಯಿತು. ಈ ವೇಳೆ ಕೆಎಲ್ ರಾಹುಲ್ 52 ಮತ್ತು ಮಯಾಂಕ್ ಅಗರ್ವಾಲ್ 69 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಬಳಿಕ ಮಳೆ ನಿಲ್ಲುವ ಸೂಚನೆ ಕಾಣದ ಕಾರಣ ವಿಜೆಡಿ ನಿಯಮದ ಅನುಸಾರ ವಿಜೇತರನ್ನು ನಿರ್ಧರಿಸಲಾಯಿತು. ಈ ಮೂಲಕ ಕರ್ನಾಟಕ ನಾಲ್ಕನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆದಂತಾಗಿದೆ.