ರಾವಲ್ಪೆಂಡಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕ್ರಿಕೆಟ್ ಪಂದ್ಯಕ್ಕೆ ಮತ್ತೆ ವರುಣನ ಅಡ್ಡಿಯಾಗಿದೆ. ಹೀಗಾಗಿ, ಇಂದು ಬಾಂಗ್ಲಾದೇಶ ಮತ್ತು ಆತಿಥೇಯ ಪಾಕಿಸ್ತಾನ ನಡುವಿನ ಪಂದ್ಯ ವಿಳಂಬವಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ದಿನಗಳ ಹಿಂದೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮಳೆ ಅಡ್ಡಿಯುಂಟು ಮಾಡಿತ್ತು. ಆ ಪಂದ್ಯವು ಒಂದೂ ಎಸೆತ ಕಾಣದೆ ರದ್ದುಕೊಂಡು ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿತ್ತು.
ಎ ಗುಂಪಿನಲ್ಲಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಇತ್ತಂಡಗಳಿಗೆ ಇದು ಟೂರ್ನಿಯಲ್ಲಿ ಕನಿಷ್ಠ ಒಂದು ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳಲು ಕೊನೆಯ ಅವಕಾಶವಾಗಿದೆ.
ಪಾಕ್ ತಂಡವು ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಬಾಂಗ್ಲಾತಂಡವೂ ಭಾರತ ಮತ್ತು ಕಿವೀಸ್ ತಂಡಗಳ ವಿರುದ್ಧ ಪರಾಭವಗೊಂಡಿದೆ. ಎ ಗುಂಪಿನಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಮುನ್ನಡೆದಿವೆ.