ಮುಂಬೈ: ಟಿ20 ವಿಶ್ವಕಪ್ ಫೈನಲ್ ಗೆಲುವಿನ ರೂವಾರಿಗಳಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾದ ಪ್ರತಿಭಾವಂತ ಸ್ಪಿನ್ನರ್ ಅಕ್ಷರ್ ಪಟೇಲ್ ವಿದ್ಯಾಭ್ಯಾಸ ಮತ್ತು ಇತರೆ ಇಂಟ್ರೆಸ್ಟಿಂಗ್ ವಿಚಾರಗಳ ವಿವರ ಇಲ್ಲಿದೆ ನೋಡಿ.
ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಅಕ್ಷರ್ ಪಟೇಲ್ ಪ್ರಮುಖ ಕೊಡುಗೆ ನೀಡಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಪಾರ್ಟನರ್ ಶಿಪ್ ಮಾಡಿ 47 ರನ್ ಗಳ ಕೊಡುಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಅಕ್ಷರ್ ಪಟೇಲ್ ಮೂಲತಃ ಗುಜರಾತ್ ನವರು. 1994 ರಲ್ಲಿ ಜನಿಸಿದ ಅವರಿಗೆ ಈಗ 30 ವರ್ಷ. ತಂದೆ ರಾಜೇಶ್ ಪಟೇಲ್ ಮತ್ತು ತಾಯಿ ಪ್ರೀತಿ ಬೆನ್ ಪಟೇಲ್ ಅವರ ಮೂವರು ಮಕ್ಕಳಲ್ಲಿ ಒಬ್ಬರು. ಮಧ್ಯಮ ವರ್ಗದ ಜೀವನದಲ್ಲಿ ಬೆಳೆದವರು. ಕಳೆದ ವರ್ಷವಷ್ಟೇ ಗೆಳತಿ ಮೇಹಾ ಪಟೇಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಾಲ್ಯದಿಂದಲೂ ಅಕ್ಷರ್ ಓದಿನಲ್ಲಿ ತುಂಬಾ ಚುರುಕು. ಟಾಪರ್ ಆಗಿದ್ದ ಅವರು ಎಂಜಿನಿಯರಿಂಗ್ ಓದಿದ್ದಾರೆ. ಅವರ ತಂದೆಗೆ ಅವರು ಎಂಜಿನಿಯರ್ ಆಗಿಯೇ ವೃತ್ತಿ ಮಾಡಬೇಕು ಎಂಬ ಆಸೆಯಿತ್ತಂತೆ. ಆದರೆ ಕ್ರಿಕೆಟ್ ಮೇಲಿನ ಅವರ ಆಸಕ್ತಿ ಗಮನಿಸಿ ಕ್ರಿಕೆಟ್ ತರಬೇತಿ ಪಡೆಯಲು ಅನುಮತಿ ನೀಡಿದ್ದರಂತೆ.
ಅಕ್ಷರ್ ಟೀಂ ಇಂಡಿಯಾಗೆ ಕಾಲಿಟ್ಟಿದ್ದು 2014 ರಲ್ಲಿ. ಆದರೆ ಆರಂಭದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ. 2012 ರಲ್ಲಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ, 2014 ರಲ್ಲಿ ಪಂಜಾಬ್ ಕಿಂಗ್ಸ್ ಪರ ಮತ್ತು 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೂಡಿಕೊಂಡರು. ಈಗಲೂ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಾರೆ.
ದುರದೃಷ್ಟವಶಾತ್ ಅಕ್ಷರ್ ಪಟೇಲ್ ಗೆ ಕಳೆದ ಏಕದಿನ ವಿಶ್ವಕಪ್ ವೇಳೆ ತಂಡದಲ್ಲಿ ಸ್ಥಾನ ಸಿಕ್ಕರೂ ಗಾಯದ ಕಾರಣದಿಂದ ಹೊರಗುಳಿಯಬೇಕಾಗಿ ಬಂತು. ಆದರೆ ಈಗ ಟಿ20 ವಿಶ್ವಕಪ್ ನಲ್ಲಿ ಸಿಕ್ಕ ಅವಕಾಶವನ್ನು ಅವರು ಎರಡೂ ಕೈಗಳಿಂದ ಬಳಸಿಕೊಂಡರು. ಸ್ಪಿನ್ ಬೌಲಿಂಗ್ ಜೊತೆ ಬ್ಯಾಟಿಗನಾಗಿಯೂ ತಂಡಕ್ಕೆ ಉಪಯುಕ್ತರಾಗುತ್ತಾರೆ.