ಕಳೆದ ಮೇನಲ್ಲಿ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ 5 ಪಂದ್ಯಾವಳಿಯಲ್ಲಿ ವಿಫಲವಾದ ನೈಜಿರೀಯಾದ ಪುರುಷರ ಕ್ರಿಕೆಟ್ ತಂಡವನ್ನು ನೈಜೀರಿಯಾ ಕ್ರಿಕೆಟ್ ಒಕ್ಕೂಟ ಸಂಪೂರ್ಣವಾಗಿ ವಜಾಮಾಡಿದೆ ಮತ್ತು ನೈಜೀರಿಯಾ ಕೋಚ್‌ರನ್ನು ಕೂಡ ವಜಾ ಮಾಡಿದೆ.
6 ತಂಡಗಳ ಪೈಕಿ ಆಫ್ರಿಕನ್ನರು ಏಕಮಾತ್ರ ಜಯವನ್ನು ಮಾತ್ರ ಗಳಿಸಿ ಕೊನೆಯ ಸ್ಥಾನದಲ್ಲಿ ಉಳಿದರು. ಕುನ್ಲೆ ಅಡೆಗ್‌ಬೋಲಾ ನಾಯಕತ್ವದಲ್ಲಿ ನೈಜಿರಿಯನ್ನರು ಟಾಂಜಾನಿಯಾ ತಂಡ ಸೋಲಿಸುವ ಮೂಲಕ ಶುಭಾರಂಭ ಮಾಡಿದ್ದರು. ಆದರೆ ನಂತರ ಓಮನ್, ಗುರೆನ್‌ಸೆ, ವನುವಾಟು ಮತ್ತು ಜರ್ಸಿಗೆ ಸೋತಿದ್ದರು. ಬಳಿಕ ಐದನೇ ಸ್ಥಾನ ನಿರ್ಧಾರಕ ಪಂದ್ಯದಲ್ಲಿ ತಾವು ಗೆಲುವು ಗಳಿಸಿದ್ದ ತಾಂಜಾನಿಯಾ ವಿರುದ್ಧ ಸೋಲು ಅನುಭವಿಸಿತು.
ಆತಿಥೇಯ ಜರ್ಸಿ ತಂಡವು ಫೈನಲ್‌ನಲ್ಲಿ ಓಮನ್ ತಂಡವನ್ನು 44 ರನ್‌ಗಳಿಂದ ಸೋಲಿಸಿ ಚಾಂಪಿಯನ್ಸ್ ಆಯಿತು. ನೈಜೀರಿಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಎಮೆಕಾ ಒನೀಯಾಮಾ ಪತ್ರಿಕಾಗೋಷ್ಠಿಯಲ್ಲಿ ನೈಜೀರಿಯಾ ತಂಡದ ವಜಾ ಆದೇಶವನ್ನು ಪ್ರಕಟಿಸಿದರು.
ರಾಷ್ಟ್ರೀಯ ತಂಡಕ್ಕೆ ದಿನಕ್ಕೆ 100 ಡಾಲರ್ ವೇತನವನ್ನು ಪಾವತಿ ಮಾಡಿದ್ದು ಇದೇ ಮೊದಲ ಬಾರಿ ಎಂದು ಅವರು ಹೇಳಿದರು.
ನೈಜೀರಿಯಾ ಕ್ರಿಕೆಟ್‌ಗೆ ಭಾರತದ ನಂಟು ಕೂಡ ಇದೆ. ಬಿಸಿಸಿಐ ಪ್ರಮಾಣೀಕರಿಸಿದ ಲೆವೆಲ್ ಎ ಕೋಚ್ ಶ್ರೀರಾಂ ರಂಗನಾಥನ್ ಅವರನ್ನು ನೈಜೀರಿಯಾ ನೇಮಕ ಮಾಡಿಕೊಂಡಿತ್ತು. ಆದರೆ ತಂಡ ಕಡೆಯ ಸ್ಥಾನ ಪಡೆದಿದ್ದರಿಂದ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದ ಹಾಗಾಯಿತು. ನೈಜೀರಿಯಾ ತಂಡದ ಪುನರ್ನಿರ್ಮಾಣ ಪ್ರಕ್ರಿಯೆ ಕೈಗೆತ್ತಿಕೊಂಡು ಅಂಡರ್-19 ಆಟಗಾರರನ್ನು ಆಡಿಸಲಾಗುತ್ತದೆ ಮತ್ತು ಹೊಸ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗುತ್ತದೆಂದು ಅವರು ತಿಳಿಸಿದರು
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ