ಮುಂಬೈ: 2023ರ ವಿಶ್ವಕಪ್ ಏಕದಿನ ಟೂರ್ನಿಯಲ್ಲಿ ಮಿಂಚಿದ್ದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಕೊನೆಗೂ ಭಾಗ್ಯದ ಬಾಗಿಲು ತೆರೆದಿದೆ. ಶಮಿ ಅವರು 14 ತಿಂಗಳುಗಳ ನಂತರ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ.
ಇದೇ ತಿಂಗಳು ಇಂಗ್ಲೆಂಡ್ ಎದುರು ನಡೆಯಲಿರುವ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಅವರು ಆಡಿದ್ದರು.
ನಂತರ ತಮ್ಮ ಹಿಮ್ಮಡಿ ಗಾಯದಿಂದಾಗಿ ತಂಡದಿಂದ ಅವರು ಹೊರಗುಳಿದಿದ್ದರು. ಹೋದ ವರ್ಷ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ದೀರ್ಘ ಅವಧಿಗೆ ಆರೈಕೆಯಲ್ಲಿದ್ದರು.
ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಲು ಅವರು ಆಯ್ಕೆಯಾಗಬೇಕಿತ್ತು. ಅದರೆ ಅವರ ಮೊಣಕಾಲಿನಲ್ಲಿ ಉರಿಯೂತ ಇದ್ದ ಕಾರಣ ಆಯ್ಕೆ ಮಾಡಿರಲಿಲ್ಲ. ಅವರು ದೇಶಿ ಟೂರ್ನಿಗಳಲ್ಲಿ ಆಡಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡದಲ್ಲಿ ಶಮಿ ಆಡುವರು. ಕೋಲ್ಕತ್ತದಲ್ಲಿ ಇದೇ 22ರಂದು ಮೊದಲ ಪಂದ್ಯ ನಡೆಯಲಿದೆ.
ತಂಡ ಹೀಗಿದೆ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಧ್ರುವ ಜುರೇಲ್ (ವಿಕೆಟ್‌ಕೀಪರ್).