Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ಈ ಥ್ರೀ ಸ್ಟಾರ್ ಗಳಿಂದ ಗೆದ್ದ ಟೀಂ ಇಂಡಿಯಾ

ವಿಶ್ವಕಪ್ 2019: ಈ ಥ್ರೀ ಸ್ಟಾರ್ ಗಳಿಂದ ಗೆದ್ದ ಟೀಂ ಇಂಡಿಯಾ
ಲಂಡನ್ , ಗುರುವಾರ, 6 ಜೂನ್ 2019 (09:15 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರನ್ನು ದ.ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವಿನೊಂದಿಗೆ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಭಾರತದ ಗೆಲುವಿಗೆ ಕಾರಣರಾದವರು ಥ್ರೀ ಸ್ಟಾರ್ ಗಳು.


ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾಗೆ ಆರಂಭದಲ್ಲಿಯೇ ಕಾಡಿದವರು ವೇಗಿ ಜಸ್ಪ್ರೀತ್ ಬುಮ್ರಾ. ಭುವನೇಶ್ವರ್ ಕುಮಾರ್  ಅಷ್ಟೇನೂ ಪ್ರಭಾವ ಬೀರದಿದ್ದರೂ ಇನ್ನೊಂದು ತುದಿಯಿಂದ ಅದ್ಭುತವಾಗಿ ಬಾಲ್ ಎಸೆದ ಬುಮ್ರಾ ಎದುರಾಳಿಗಳ ಎರಡು ಪ್ರಮುಖ ವಿಕೆಟ್ ಕಿತ್ತು ಉಸಿರೆತ್ತದಂತೆ ಮಾಡಿದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ ದಾಳಿಗಿಳಿದ ಯಜುವೇಂದ್ರ ಚಾಹಲ್ ಎದುರಾಳಿಗಳಿಗೆ ಸಿಂಹ ಸ್ವಪ್ನರಾದರು. ಅದರಲ್ಲೂ ವಿಶೇಷವಾಗಿ ಹರಿಣಗಳು ಇನ್ನೇನು ಉತ್ತಮ ಜತೆಯಾಟ ಕಟ್ಟುತ್ತಿದ್ದಾರೆ ಎನ್ನುತ್ತಿರುವಾಗಲೇ ನಾಲ್ಕು ವಿಕೆಟ್ ಕಿತ್ತು ರನ್ ಗತಿ ಹೆಚ್ಚದಂತೆ ನೋಡಿಕೊಂಡರು. ಇದರಿಂದಾಗಿ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಲಷ್ಟೇ ಶಕ್ತವಾಯಿತು.

ನಂತರ ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭವೇನೂ ಉತ್ತಮವಾಗಿರಲಿಲ್ಲ. ಆರಂಭದಿಂದಲೂ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ರನ್ ಗಳಿಸಲು ಪರದಾಡಿದರು. ಅದರಲ್ಲೂ ಧವನ್ ಎರಡೆರಡು ಬಾರಿ ಜೀವದಾನ ಪಡೆದರೂ ಅದರ ಲಾಭವೆತ್ತಲಿಲ್ಲ. ವೇಗಿಗಳ ಮುಂದೆ ಮುಗ್ಗರಿಸಿದ ಧವನ್ 8 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಡೆದರು.

ತೀರಾ ನಿಧಾನಗತಿಯಲ್ಲಿ ರನ್ ಗಳಿಸುತ್ತಿದ್ದ ಕೊಹ್ಲಿ ಕೂಡಾ ತಮ್ಮ ಎಂದಿನ ಛಮಕ್ ತೋರಿಸಲಿಲ್ಲ. ರೋಹಿತ್ ಜತೆಗೆ ಕೆಲ ಹೊತ್ತು ಆಟವಾಡಿದರೂ ಅವರ ಇನಿಂಗ್ಸ್ 18 ರನ್ ಗಳಿಗೆ ಮುಕ್ತಾಯ ಕಂಡಿತು. ನಂತರ ಬಂದ ಕೆಎಲ್ ರಾಹುಲ್ ರೋಹಿತ್ ಗೆ ಉತ್ತಮ ಸಾಥ್ ನೀಡಿದರು. 26 ರನ್ ಗಳಿಸಿದ ರಾಹುಲ್ ಔಟಾಗುತ್ತಿದ್ದಂತೆ ಬಂದ ಧೋನಿ ತಮ್ಮ ಅನುಭವಕ್ಕೆ ತಕ್ಕ ಆಟವಾಡಿ ಇನ್ನೇನು ಗೆಲುವಿನ ಗುರಿ ತಲುಪಿದಾಗ 34 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಆದರೆ ಇವರೆಲ್ಲರ ವಿಕೆಟ್ ಉದುರುತ್ತಿದ್ದರೂ ತಾಳ್ಮೆಯ ಆಟವಾಡಿದ ರೋಹಿತ್ ಶರ್ಮಾ ಶತಕ ಸಿಡಿಸಿ (122) ಕೊನೆಯವರೆಗೂ ಅಜೇಯರಾಗುಳಿದು ಭಾರತಕ್ಕೆ ಗೆಲುವು ತಂದುಕೊಟ್ಟರು. ಹೀಗಾಗಿ ಭಾರತದ ಪಾಲಿಗೆ ನಿನ್ನೆ ಬುಮ್ರಾ, ಚಾಹಲ್ ಮತ್ತು ರೋಹಿತ್ ಥ್ರೀ ಸ್ಟಾರ್ ಗಳಾಗಿ ಮಿಂಚಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಕ್ರಿಕೆಟ್ 2019: ಮೊದಲ ಪಂದ್ಯದಲ್ಲಿಯೇ ಟೀಂ ಇಂಡಿಯಾಗೆ ಚೇಸಿಂಗ್ ಭಾಗ್ಯ