ತಿರುವನಂತರಪುರಂ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟಿ20 ಪಂದ್ಯವನ್ನು 44 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.
ತಿರುವನಂತರಪುರಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದು ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮಾಡಿದ ಗರಿಷ್ಠ ರನ್ ದಾಖಲೆಯಾಗಿದೆ. ಅಲ್ಲದೆ ಅಗ್ರ ಕ್ರಮಾಂಕದ ಮೂವರು 50 ಪ್ಲಸ್ ರನ್ ಗಳಿಸಿದ್ದು ದಾಖಲೆಯಾಯಿತು.
ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟಾಯ್ನಿಸ್ 45, ನಾಯಕ ಮ್ಯಾಥ್ಯೂ ವೇಡ್ 42 ಗಳಿಸಿದರು. ಭಾರತದ ಪರ ರವಿ ಬಿಷ್ಣೋಯ್ ಪ್ರಮುಖ 3 ವಿಕೆಟ್ ಕಬಳಿಸಿದರು. ಪ್ರಸಿದ್ಧ ಕೃಷ್ಣ 4 ಓವರ್ ಗಳಲ್ಲಿ 41 ರನ್ ಗಳಿಸಿ ಕೊಂಚ ದುಬಾರಿಯಾದರೂ 3 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದಂತೆ ಅಕ್ಸರ್ ಪಟೇಲ್, ಅರ್ಷ್ ದೀಪ್ ಸಿಂಗ್, ಮುಕೇಶ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು.
ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕಳೆದ 2020 ರ ನಂತರ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಪಂದ್ಯಗಳಲ್ಲಿ 8 ಪಂದ್ಯಗಳ ಪೈಕಿ 6 ನೇ ಗೆಲುವು ಸಂಪಾದಿಸಿತು. ಸರಣಿಯಲ್ಲಿ ಮೂರು ಪಂದ್ಯಗಳು ಬಾಕಿಯಿದ್ದು ಭಾರತ ಒಂದೇ ಒಂದು ಪಂದ್ಯ ಗೆದ್ದರೂ ಸರಣಿ ಕೈ ವಶ ಮಾಡಿಕೊಳ್ಳಲಿದೆ.