ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಮತ್ತು 222 ರನ್ ಗಳಿಂದ ಗೆಲ್ಲುವುದರ ಮೂಲಕ ದಾಖಲೆ ಬರೆಯಿತು.
ಫಾಲೋ ಆನ್ ಪಡೆದಿದ್ದ ಲಂಕಾ ಇಂದು ದ್ವಿತೀಯ ಸರದಿಯಲ್ಲಿ 178 ರನ್ ಗಳಿಗೆ ಆಲೌಟ್ ಆಯಿತು. ರವೀಂದ್ರ ಜಡೇಜಾ ಪಾಲಿಗಂತೂ ಇದು ಡ್ರೀಮ್ ಮ್ಯಾಚ್. ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ಅಜೇಯ 175 ರನ್ ಸಿಡಿಸಿದ್ದ ಜಡೇಜಾ ಬೌಲಿಂಗ್ ನಲ್ಲಿ 5 ವಿಕೆಟ್ ಕಬಳಿಸಿದ್ದರು. ಎರಡನೇ ಇನಿಂಗ್ಸ್ ನಲ್ಲೂ ಬೌಲಿಂಗ್ ನಲ್ಲಿ ಮಿಂಚಿ 4 ವಿಕೆಟ್ ತಮ್ಮದಾಗಿಸಿಕೊಂಡರು. ರವಿಚಂದ್ರನ್ ಅಶ್ವಿನ್ ಕೂಡಾ 4 ವಿಕೆಟ್ ಪಡೆದರೆ ಉಳಿದೆರಡು ವಿಕೆಟ್ ಮೊಹಮ್ಮದ್ ಶಮಿ ಪಾಲಾಯಿತು.
ಈ ಮೂಲಕ ನಾಯಕನಾಗಿ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೇ ಇನಿಂಗ್ಸ್ ಮತ್ತು ಬೃಹತ್ ಅಂತರದಿಂದ ಗೆದ್ದ ದಾಖಲೆ ಬರೆದರು. ಶ್ರೀಲಂಕಾ ಪಾಲಿಗೆ ಇದು ಮೂರನೇ ಅತೀ ದೊಡ್ಡ ಅಂತರದ ಸೋಲೆನಿಸಿಕೊಂಡಿತು.