ತಿರುವನಂತರಪುರಂ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯವನ್ನು ಬರೋಬ್ಬರಿ 317 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಹಾಗೂ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ.
ಮೂರನೇ ಏಕದಿನ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಏಕದಿನ ಇತಿಹಾಸದಲ್ಲೇ ಭಾರತಕ್ಕೆ ಇದು ಅತೀ ದೊಡ್ಡ ಅಂತರದ ಗೆಲುವಾಗಿದೆ. ಅಲ್ಲದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ಪ್ಲಸ್ ರನ್ ಅಂತರದಲ್ಲಿ ಗೆಲುವು ಕಂಡ ವಿಶ್ವದ ಮೊದಲ ತಂಡ ಎಂಬ ದಾಖಲೆ ಭಾರತದ್ದಾಗಿದೆ. ಮೊದಲು ಬ್ಯಾಟಿಂಗ್ ಮಾಡಡಿದ್ದ ಟೀಂ ಇಂಡಿಯಾ 390 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಲಂಕಾ ಕೇವಲ 73 ರನ್ ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶುಬ್ನಂ ಗಿಲ್ ಶತಕ ಸಿಡಿಸಿದ್ದರು. ಕೊಹ್ಲಿಗೆ ಇದು 74 ನೇ ಅಂತಾರಾಷ್ಟ್ರೀಯ ಶತಕವಾಗಿತ್ತು. ಶ್ರೀಲಂಕಾ ವಿರುದ್ಧ 10 ನೇ ಶತಕ. ಈ ಮೂಲಕ ಲಂಕಾ ವಿರುದ್ಧ ತವರಿನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಸಚಿನ್ ದಾಖಲೆಯನ್ನು ಹಿಂದಿಕ್ಕಿದರು. ಅಲ್ಲದೆ ಒಂದೇ ಎದುರಾಳಿಯ ವಿರುದ್ಧ ಗರಿಷ್ಠ (21) ಶತಕ ಸಿಡಿಸಿದ ದಾಖಲೆ ಮಾಡಿದರು. ಕೊಹ್ಲಿ ಈಗ ಏಕದಿನ ಪಂದ್ಯಗಳಲ್ಲಿ ಗರಿಷ್ಠ ರನ್ ಗಳಿಸಿದ ಆಲ್ ಟೈಮ್ ಆಟಗಾರರ ಲಿಸ್ಟ್ ನಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದರು.