ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿಗಳಿಗೆ ಗೆಲುವಿಗೆ 359 ರನ್ ಗಳ ಗುರಿ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 358 ರನ್ ಗಳಿಸಿದೆ.. ಆರಂಭದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಲಯಕ್ಕೆ ಮರಳಿದ ಸಂತಸದಲ್ಲಿದ್ದ ಅಭಿಮಾನಿಗಳಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಮತ್ತೆ ಕುಸಿತ ಕಾಣುವ ಮೂಲಕ ಬ್ಯಾಟಿಂಗ್ ಹುಳುಕು ತೋರಿಸಿ ನಿರಾಸೆ ಮೂಡಿಸಿದರು.
ಆರಂಭಿಕರು ಮೊದಲ ವಿಕೆಟ್ ಗೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 193 ರನ್ ಗಳ ಜತೆಯಾಟವಾಡಿದರು. ರೋಹಿತ್ ಶರ್ಮಾ 95 ರನ್ ಗಳಿಗೆ ಔಟಾಗಿ ಶತಕ ವಂಚಿತರಾದರು. ಧವನ್ ತಮ್ಮ ಇಷ್ಟು ದಿನಗಳ ಬ್ಯಾಟಿಂಗ್ ಬರಗಾಲಕ್ಕೆ ಒಮ್ಮೆಲೇ ಉತ್ತರ ನೀಡುವಂತೆ 115 ಎಸೆತಗಳಲ್ಲಿ 143 ರನ್ ಗಳಿಸಿದರು.
ಆದರೆ ಈ ಇಬ್ಬರೂ ಔಟಾಗುತ್ತಿದ್ದಂತೇ ಟೀಂ ಇಂಡಿಯಾ ಕುಸಿತ ಕಂಡಿತು. ವಿರಾಟ್ ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್ ಗಿಳಿದ ಕೆಎಲ್ ರಾಹುಲ್ ನಿಧಾನಗತಿಯ ಇನಿಂಗ್ಸ್ ಆಡಿ ಕೇವಲ 26 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ, ಸಿಡಿದು ಮೊತ್ತ ಹೆಚ್ಚಿಸಬೇಕಿದ್ದ ನಾಯಕ ಕೊಹ್ಲಿ 7 ರನ್ ಗೆ ಪೆವಿಲಿಯನ್ ಹಾದಿ ಹಿಡಿದರು.
ರಿಷಬ್ ಪಂತ್ ಕೊಂಚ ಆಕ್ರಮಣಕಾರಿ ಆಟವಾಡಿದರೂ ಅವರ ಇನಿಂಗ್ಸ್ 36 ರನ್ ಗಳಿಗೆ ಕೊನೆಗೊಂಡಿತು. ಒಂದು ವೇಳೆ ಮಧ್ಯಮ ಕ್ರಮಾಂಕದ ಆಟಗಾರರು ಖ್ಯಾತಿಗೆ ತಕ್ಕ ಆಟವಾಡುತ್ತಿದ್ದರೆ ಟೀಂ ಇಂಡಿಯಾ ಮೊತ್ತ ಇನ್ನಷ್ಟು ಹೆಚ್ಚಬೇಕಿತ್ತು. ಆದರೆ ಮತ್ತೆ ಟೀಂ ಇಂಡಿಯಾ ತನ್ನ ಬ್ಯಾಟಿಂಗ್ ಹುಳುಕು ತೋರಿಸಿಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ