ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಅತಿಯಾದ ಪ್ರಯೋಗ ಮಾಡಲು ಹೋಗಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.
ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದ ವಿಂಡೀಸ್ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲು ಅಕ್ಸರ್ ಪಟೇಲ್, ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಲಾಗಿತ್ತು. ಆರಂಭಿಕ ಇಶಾನ್ ಕಿಶನ್ 55, ಶುಬ್ಮನ್ ಗಿಲ್ 34 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಬ್ಯಾಟಿಂಗ್ ಬರಲಿಲ್ಲ. ವಿಂಡೀಸ್ ನ ದುರ್ಬಲ ಬೌಲಿಂಗ್ ಎದುರೂ ಟೀಂ ಇಂಡಿಯಾ ಯುವ ಬ್ಯಾಟಿಗರು ಪರದಾಡಿತು. ಸೂರ್ಯಕುಮಾರ್ ಯಾದವ್ 24 ರನ್, ಶ್ರಾದ್ಧೂಲ್ ಠಾಕೂರ್ 16 ರನ್ ಗಳಿಸದೇ ಇದ್ದಿದ್ದರೆ ತಂಡದ ಮೊತ್ತ 150 ಪ್ಲಸ್ ಕೂಡಾ ದಾಟುತ್ತಿರಲಿಲ್ಲ.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ 36.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಮೊದಲ ಜಯ ಕಂಡಿತು. ನಾಯಕನ ಆಟವಾಡಿದ ಶೈ ಹೋಪ್ಸ್ ಅಜೇಯ 63 ರನ್ ಸಿಡಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಕಾರ್ಟಿ ಅಜೇಯ 48 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ 3,ಕುಲದೀಪ್ ಯಾದವ್ 1 ವಿಕೆಟ್ ಕಬಳಿಸಿದರು. ಟೀಂ ಇಂಡಿಯಾ ಈ ಅತಿಯಾದ ಪ್ರಯೋಗದಿಂದಾಗಿ ಅಭಿಮಾನಿಗಳಿಂದ ಛೀಮಾರಿ ಸಿಕ್ಕಿದೆ.