ದುಬೈ: ಟಿ20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಅಜೇಯವಾಗುಳಿಯುವ ಟೀಂ ಇಂಡಿಯಾ ಕನಸು ಭಗ್ನಗೊಂಡಿದೆ. ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿ ಮುಖಭಂಗಕ್ಕೀಡಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಈ ಪಿಚ್ ನಲ್ಲಿ ಇದು ಪೈಪೋಟಿಕರ ಮೊತ್ತವೇ ಆಗಿತ್ತು.
ಆದರೆ ಟೀಂ ಇಂಡಿಯಾ ಬೌಲರ್ ಗಳು ಎದುರಾಳಿಗಳನ್ನು ಕಟ್ಟಿ ಹಾಕುವುದಿರಲಿ, ಪರಿಣಾಮವೂ ಬೀರಲಿಲ್ಲ. ಪಾಕ್ ನಾಯಕ ಬಾಬರ್ ಅಜಮ್ (ಅಜೇಯ 68) ಮತ್ತು ಮೊಹಮ್ಮದ್ ರಿಜ್ವಾನ್ (ಅಜೇಯ79) ಅಬ್ಬರಕ್ಕೆ ಟೀಂ ಇಂಡಿಯಾ ಉತ್ತರವಿಲ್ಲದೇ ನಿಂತಿತು. ಅಂತಿಮವಾಗಿ ಪಾಕ್ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 152 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ವಿಶ್ವಕಪ್ ನಲ್ಲಿ ಇದೇ ಮೊದಲ ಬಾರಿಗೆ ಪಾಕ್ ವಿರುದ್ಧ ಸೋತ ಕುಖ್ಯಾತಿಗೆ ಟೀಂ ಇಂಡಿಯಾ ಒಳಗಾಯಿತು.