Publish Date: Sat, 02 Jan 2021 (10:11 IST)
Updated Date: Sat, 02 Jan 2021 (10:12 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲಿನ ಅಭಿಮಾನದಿಂದ ಅವರು ಹೋಟೆಲ್ ನಲ್ಲಿ ಊಟ ಮಾಡಿದ ಬಿಲ್ ಅವರಿಗೇ ಅರಿವಿಲ್ಲದಂತೇ ಪಾವತಿಸಿದೆ ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಪುರಾವೆಯಾಗಿ ಅವರು ಪಾವತಿಸಿದ ಬಿಲ್ ಹಾಗೂ ಪಕ್ಕದ ಟೇಬಲ್ ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ವಿಡಿಯೋವನ್ನೂ ಫೋಟೋ ಸಮೇತ ಪ್ರಕಟಿಸಿದ್ದಾರೆ. ಆದರೆ ನವಲ್ದೀಪ್ ಸಿಂಗ್ ಎಂಬ ಈ ಅಭಿಮಾನಿ ತಮ್ಮ ಫೋಟೋವನ್ನು ಮಾತ್ರ ಎಲ್ಲೂ ಪ್ರಕಟಿಸಿಲ್ಲ. ತಾನು ಹೋದ ರೆಸ್ಟೋರೆಂಟ್ ನಲ್ಲಿ ಪಕ್ಕದ ಟೇಬಲ್ ನಲ್ಲೇ ಭಾರತೀಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ರಿಷಬ್ ಪಂತ್, ಶಬ್ನಂ ಗಿಲ್, ನವದೀಪ್ ಸೈನಿ ಊಟ ಮಾಡುತ್ತಿದ್ದರು. ಅವರನ್ನು ನೋಡುತ್ತಾ ಕೆಲವು ಕಾಲ ಇರಬೇಕೆಂದು ಹಸಿವಿಲ್ಲದಿದ್ದರೂ ಎಕ್ಸ್ ಟ್ರಾ ಊಟ ಆರ್ಡರ್ ಮಾಡಿ ನೋಡುತ್ತಾ ನಿಂತಿದ್ದೆ. ಬಳಿಕ ನನ್ನ ಬಿಲ್ ಜೊತೆಗೆ ಅವರ ಬಿಲ್ ನ್ನೂ ಅವರಿಗೆ ಗೊತ್ತಾಗದಂತೆ ಪಾವತಿಸಿದೆ. ಅದು ಗೊತ್ತಾದಾಗ ನನ್ನ ಬಳಿಗೆ ಬಂದ ರೋಹಿತ್ ಶರ್ಮಾ ಹೀಗೆಲ್ಲಾ ಮಾಡಬೇಡಿ. ಚೆನ್ನಾಗಿರಲ್ಲ ಎಂದರು.
ನೀವು ನಮ್ಮ ಹೀರೋ. ನಿಮಗಾಗಿ ನಾನು ಮಾಡಿದ್ದು ಸಣ್ಣ ಸೇವೆಯಷ್ಟೇ ಎಂದೆ. ಅದಕ್ಕೆ ರಿಷಬ್ ಪಂತ್ ಕೂಡಾ ದುಡ್ಡು ತೆಗೆದುಕೊಳ್ಳಿ. ದುಡ್ಡು ತೆಗೆದುಕೊಳ್ಳದೇ ಸೆಲ್ಫೀ ಕೊಡಲ್ಲ ಎಂದರು. ನಾನು ಒಪ್ಪಲಿಲ್ಲ. ಕೊನೆಗೆ ಅವರು ನನ್ನ ಪತ್ನಿ ಬಳಿ ಅತ್ತಿಗೆ, ಊಟಕ್ಕೆ ಧನ್ಯವಾದ ಎಂದರು. ಕೊನೆಗೂ ನಮ್ಮ ಜೊತೆಗೆ ಫೋಟೋ ತೆಗೆಸಿಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.