ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದ ವಾಜಪೇಯಿಯನ್ನು ಕ್ರಿಕೆಟಿಗ ಸೆಹ್ವಾಗ್ ಸ್ಮರಿಸಿದ್ದು ಹೀಗೆ!

ಶುಕ್ರವಾರ, 17 ಆಗಸ್ಟ್ 2018 (09:01 IST)
ನವದೆಹಲಿ: ಟೀಂ ಇಂಡಿಯಾ 2004 ರಲ್ಲಿ ಮಹತ್ವದ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಸರಣಿ ಆಡಲು ಪಾಕ್ ನೆಲಕ್ಕೆ ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ಧೈರ್ಯ ಮಾಡಿ ನಮ್ಮ ಕ್ರಿಕೆಟಿಗರನ್ನು ಎದುರಾಳಿ ರಾಷ್ಟ್ರಕ್ಕೆ ಕಳುಹಿಸಲು ಒಪ್ಪಿಗೆ ಕೊಟ್ಟಿದ್ದರು.

ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ಪಾಕ್ ಗೆ ವಿಮಾನವೇರುವ ಮುನ್ನ ಅಂದಿನ ಪ್ರಧಾನಿ ವಾಜಪೇಯಿ ಅವರನ್ನು ಭೇಟಿ ಮಾಡಿ ಫೋಟೋ ಸೆಷನ್ ನಡೆಸಿತು. ಈ ಸರಣಿ ಎರಡು ದೇಶಗಳ ನಡುವೆ ಹೊಸ ಬಾಂಧವ್ಯ ಸೃಷ್ಟಿಸುವ ಸರಣಿಯಾಗಲಿ ಎಂದು ಅಟಲ್ ಮನದುಂಬಿ ಹಾರೈಸಿ ಕಳುಹಿಸಿದ್ದರು.

ಇದೀಗ ನಮ್ಮೆಲ್ಲರನ್ನು ಅಗಲಿದ ಮಹಾನ್ ನಾಯಕನಿಗೆ ಅಂದು ತಂಡದಲ್ಲಿದ್ದ ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸೆಹ್ವಾಗ್ ಅಂತೂ ತಾವು ಅಂದು ವಾಜಪೇಯಿ ಜತೆ ತೆಗೆಸಿದ್ದ ಟೀಂ ಇಂಡಿಯಾ ಫೋಟೋ ಹಾಕಿ ಅವರ ಬಗ್ಗೆ ಕವಿತೆಯ ಸಾಲುಗಳನ್ನೇ ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್ ಭಾರತ ಮಹಾನ್ ನಾಯಕನನ್ನು ಕಳೆದುಕೊಂಡಿದೆ. ಇಂತಹ ಪುತ್ರ ಭಾರತ ಮಾತೆಗೆ ಇನ್ನೊಂದು ಬಾರಿ ಹುಟ್ಟಲಾರ ಎಂದು ಇಬ್ಬರೂ ದಿಗ್ಗಜ ಕ್ರಿಕೆಟಿಗರು ಬಣ್ಣಿಸಿದ್ದಾರೆ.

ಇವರು ಮಾತ್ರವಲ್ಲದೆ, ಸುರೇಶ್ ರೈನಾ, ಹರ್ಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್ ಸೇರಿದಂತೆ ಕ್ರಿಕೆಟ್ ಲೋಕವೇ ದಿಗ್ಗಜ ನಾಯಕನ ನಿಧನಕ್ಕೆ ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ನಿಧನ